ಎಸ್‍ಸಿ-ಎಸ್‍ಟಿ ವರ್ಗದವರು ಮಾಧ್ಯಮ ಕೇತ್ರದಲ್ಲಿ ಕೆಲಸ ಮಾಡಲು ಆರ್ಥಿಕ ಶಕ್ತಿ ಅಗತ್ಯ : ಸಚಿವ ಎಚ್.ಸಿ.ಮಹದೇವಪ್ಪ
ಬೆಂಗಳೂರು: ಎಸ್‍ಟಿ-ಎಸ್‍ಟಿ, ಹಿಂದುಳಿದ ವರ್ಗಗಳು ಹಾಗೂ ಶೂದ್ರ ಸಮುದಾಯಗಳು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ಆರ್ಥಿಕ ಶಕ್ತಿ ಅಗತ್ಯ. ಕರ್ನಾಟಕ ಎಸ್‍ಟಿ-ಎಸ್‍ಟಿ ಪತ್ರಿಕಾ ಸಂಘದ ಬೇಡಿಕೆಗಳನ್ನು ಪರಿಶೀಲಿಸಿ, ಜಾರಿಗೊಳಿಸಲಾಗುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದ್ದಾರೆ.
ಶುಕ್ರವಾರ ನಗರದ ಗಾಂಧಿ ಭವನದಲ್ಲಿ ರಾಜ್ಯ ಎಸ್‍ಟಿ-ಎಸ್‍ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ಆಯೋಜಸಿದ್ದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಸ್‍ಟಿ-ಎಸ್‍ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಮಾಧ್ಯಮ ಕ್ಷೇತ್ರದಲ್ಲಿ ಇರುವುದು ಕಡಿಮೆ. ಡಾ.ಅಂಬೇಡ್ಕರ್ ‘ಮೂಕನಾಯಕ ಮತ್ತು ಬಹಿಷ್ಕೃತ ಭಾರತ’ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಗಾಂಧೀಜಿ, ಲೋಹಿಯಾ, ಬಾಲಗಂಗಾಧರ ತಿಲಕ್‍ರು ಕೂಡ ಪತ್ರಿಕೆ ನಡೆಸುತ್ತಿದ್ದರು. ಗಾಂಧೀಜಿ ಜನರ ಧ್ವನಿಯಾಗಿ ಕೆಲಸ ಮಾಡಲು ಪ್ರಯತ್ನ ಮಾಡಿದರೆ, ಡಾ.ಅಂಬೇಡ್ಕರ್ ಅವರು ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡಿದರು ಎಂದು ತಿಳಿಸಿದರು.
‘ನಮಗೆ ಬೇಕಾದ ಸಂವಿಧಾನ ಕೊಡಿ, ಮತದಾನದ ಹಕ್ಕನ್ನು ತೆಗೆದು ಹಾಕಿ’ ಎಂದು ಧಾರ್ಮಿಕ ಮುಖ್ಯಸ್ಥರು ಮಾತನಾಡುತ್ತಾರೆ. ದೇಶ ಇಂದು ಎಂತಹ ಅಪಾಯಕಾರಿ ಸನ್ನಿವೇಶದ ಕಡೆಗೆ ಜಾರುತ್ತಿದೆ ಎಂದು ಪತ್ರಕರ್ತರಿಗೆ ಅರ್ಥವಾಗುತಿದೆ. ಅದಕ್ಕಾಗಿ ಪತ್ರಿಕೆಗಳು ಜನರ ಬದುಕು ಭಾವನೆ, ಸಂಸ್ಕೃತಿ, ಪರಂಪರೆ, ಮೌಲ್ಯಗಳನ್ನು ಪ್ರತಿ ಬಿಂಬಿಸುವ ಕೆಲಸ ಮಾಡುಬೇಕು ಎಂದು ಮಹದೇವಪ್ಪ ಸಲಹೆ ನೀಡಿದರು.
ಸಂಸ್ಕೃತಿ ಎಂದರೆ ಧರ್ಮ ಎಂದು ತಿಳಿದುಕೊಳ್ಳಲಾಗಿದೆ. ಸಂಸ್ಕೃತಿ ಎನ್ನುವುದು ವೈವಿಧ್ಯ ಆಚಾರ ವಿಚಾರಗಳ ಬದುಕಿನ ವಿಶ್ಲೆಷಣೆ ಇದರ ತಳಹದಿಯ ಮೇಲೆ ಇರುವುದು ಧರ್ಮ. ಧರ್ಮದ ತಳಹದಿಯ ಮೇಲೆ ನಮ್ಮ ಸಂಸ್ಕೃತಿ ಇಲ್ಲ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸಚಿವ ಡಾ.ಮಹದೇವಪ್ಪ ಅವರು, ಎಸ್‍ಟಿ-ಎಸ್‍ಟಿ ಸಮುದಾಯದ ಪತ್ರಿಕೆಗಳಿಗೆ ಸರಕಾರ ಸರಿಯಾಗಿ ಜಾಹಿರಾತನ್ನು ನೀಡುವ ಮೂಲಕ ಆರ್ಥಿಕ ಬೆಂಬಲ ನೀಡಬೇಕು. ಎಸ್ಸಿಪಿ, ಟಿಎಸ್‍ಪಿ ಅಡಿಯಲ್ಲಿ 39 ಸಾವಿರ ಕೋಟಿ ರೂ.ಹಣ ಇದೆ. ಅದನ್ನು ಎಸ್‍ಟಿ-ಎಸ್‍ಟಿ ವರ್ಗದ ಜನರನ್ನು ಬಲಗೊಳಿಸಲು ಬಳಸಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್‍ಗೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ದತ್ತಿ ಪ್ರಶಸ್ತಿ, ಬಿ.ಎಂ.ಹನೀಫ್‍ಗೆ ಬಿ.ರಾಚಯ್ಯ ದತ್ತಿ, ಮಾವಳ್ಳಿ ಶಂಕರ್‍ಗೆ ಪ್ರೊ.ಬಿ.ಕೃಷ್ಣಪ್ಪ ದತ್ತಿ ಪ್ರಶಸ್ತಿ, ಪತ್ರಕರ್ತೆ ಮಂಜುಳಾ ಹುಲಿಕುಂಟೇ ಅವರಿಗೆ ಬಿ.ಬಸವಲಿಂಗಪ್ಪ ದತ್ತಿ ಪ್ರಶಸ್ತಿ ಹಾಗೂ ಕೆ.ಏಕಾಂತಪ್ಪ, ಸೊಗಡು ವೆಂಕಟೇಶ್, ಮಂಜುಳಾ ಕಿರುಗಾವಲು, ಸುರೇಶ್ ಸಿಂಧೆ ಅವರಿಗೆ ಗೌರವ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡಮಿ ಅಧ್ಯಕ್ಷೆ ಆಯೇಷಾ ಖಾನಂ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಎಸ್‍ಟಿ-ಎಸ್‍ಟಿ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜು, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಪ್ರೆಸ್‍ಕ್ಲಬ್ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಮತ್ತಿತರರು ಉಪಸ್ಥಿತರಿದ್ದರು.
‘ಮುಖ್ಯವಾಹಿನಿ ಮಾಧ್ಯಮಗಳಲ್ಲಿ ನಾವು ತುಂಬಾ ಚೆನ್ನಾಗಿ ಕೆಲಸ ಮಾಡಿದರೂ ಭಾಷೆ, ಬಟ್ಟೆ ಮತ್ತು ಜಾತಿಯ ಕಾರಣಕ್ಕಾಗಿ ನಾವು ನಮ್ಮ ಜಾತಿಯನ್ನು ಮುಚ್ಚಿಟ್ಟು ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಬಹುತೇಕ ಮಾಧ್ಯಮಗಳ ಉನ್ನತಮಟ್ಟದ ಹುದ್ದೆಗಳನ್ನು ನೋಡಿದರೆ ಜಾತಿಯ ಹಿನ್ನೆಲೆ, ಬಣ್ಣದ ಆಧಾರದಲ್ಲಿಯೇ ಇರುತ್ತವೆ. ಅವರಿಗೆ ಸೃಜನಶೀಲತೆ ಇಲ್ಲದಿದ್ದರೂ, ಉನ್ನತ ಹುದ್ದೆಯಲ್ಲಿರುತ್ತಾರೆ. ನಮ್ಮಂತವರಿಗೆ ಅಲ್ಲಿ ಜಾಗವೇ ಸಿಗುವುದಿಲ್ಲ. ನಮ್ಮ ಅಸ್ತಿತ್ವವನ್ನು ತೋರಿಸಿಕೊಳ್ಳುವ ಆಸೆ ಇದ್ದರೂ ಅದು ಸಾಧ್ಯವಾಗುವುದಿಲ್ಲ’
-ಮಂಜುಳಾ ಹುಲಿಕುಂಟೆ, ಪತ್ರಕರ್ತೆ