‘ಅಕ್ರಮ ಗಣಿಗಾರಿಕೆ’ ತನಿಖಾ ತಂಡದ ಅವಧಿ ವಿಸ್ತರಣೆ : ಸಚಿವ ಎಚ್.ಕೆ.ಪಾಟೀಲ್
ಎಚ್.ಕೆ.ಪಾಟೀಲ್
ಬೆಂಗಳೂರು : ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ಕುರಿತು ತನಿಖೆಗಾಗಿ ಸೃಜಿಸಲಾಗಿರುವ ಲೋಕಾಯುಕ್ತದ ವಿಶೇಷ ತನಿಖಾ ತಂಡ(ಎಸ್ಐಟಿ)ದ ಕಾರ್ಯಾವಧಿ ಯನ್ನು ಇನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 113 ಕಬ್ಬಿಣ ಗಣಿ ರಫ್ತು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. 2 ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 8 ಪ್ರಕರಣಗಳಲ್ಲಿ ಸಿ.ಆರ್.ಪಿ.ಸಿ 173(8) ತನಿಖೆ ಬಾಕಿ ಇದ್ದು, ಅದಿರು ಮೌಲ್ಯಮಾಪನ ಸಮಿತಿಯ ವರದಿ ಬರಬೇಕಿದೆ. 6 ಪ್ರಕರಣಗಳು ತನಿಖಾ ಹಂತದಲ್ಲಿವೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಕಾರ್ಯಾವಧಿಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಖರೀದಿಗಾಗಿ ಹಂಚಿಕೆ ಮಾಡಿದ್ದ ಧಾರವಾಡ ಜಿಲ್ಲೆಯ 11 ಗ್ರಾಮಗಳನ್ನು ಹಿಂಪಡೆದು, ಧಾರವಾಡದ ಪುಡಕಲಕಟ್ಟಿಯಲ್ಲಿರುವ ಮೃಣಾಲ್ ಶುಗರ್ಸ್ ಸಂಸ್ಥೆಗೆ ಮರು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಅನುಕಂಪದ ನೇಮಕಾತಿ: ಐಪಿಎಸ್ ಅಧಿಕಾರಿ ದಿವಂಗತ ಡಾ.ದಿಲೀಪ್ ಆರ್., ಅವರ ಮಗಳು ಅದಿತಿ ಡಿ. ಅವರಿಗೆ ರಾಜ್ಯ ಸರಕಾರದ ಸಚಿವಾಲಯದಲ್ಲಿ ಸಹಾಯಕರ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೇ, ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 60 ಕ್ರಿಮಿನಲ್ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.
ರೇಷ್ಮೆ ಭವನ ನಿರ್ಮಾಣಕ್ಕೆ ಅನುಮೋದನೆ: ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ 4.25 ಎಕರೆ ಜಮೀನಿನಲ್ಲಿ ರಾಜ್ಯ ಖನಿಜ ನಿಗಮದ ಸಂಪೂರ್ಣ ಬಂಡವಾಳ ಹೂಡಿಕೆಯೊಂದಿಗೆ 527.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ‘ರೇಷ್ಮೆ ಭವನ’ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು 200 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಹೆಸರಿನಲ್ಲಿ ಹೊಸ ಕಂಪನಿ ಸ್ಥಾಪಿಸಲು ನಿರ್ಣಯಿಸಲಾಗಿದೆ. ಈ ಕಂಪನಿಯು 5 ಕೋಟಿ ಷೇರು ಬಂಡವಾಳ ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಪೆರಿಫೆರಲ್ ರಿಂಗ್ ರಸ್ತೆ ಮಾರ್ಪಾಡಿತ ಆದೇಶಕ್ಕೆ ಒಪ್ಪಿಗೆ: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ)ನ ಯೋಜನೆಯಲ್ಲಿ ಒಳಗೊಂಡಿರುವ ಗ್ರಾಮಗಳ ಜಮೀನಿನ ಮಾರ್ಗಸೂಚಿ ದರಗಳು ವಿಭಿನ್ನವಾಗಿರುವುದರಿಂದ ಭೂ ಸ್ವಾಧೀನ ಪಡಿಸಿಕೊಳ್ಳುವ ಜಮೀನಿನ ಭೂಮಾಲಕರಿಗೆ ಆಯಾ ಗ್ರಾಮವಾರು ಮಾರ್ಗಸೂಚಿ ದರವನ್ನು ಗಮನದಲ್ಲಿರಿಸಿಕೊಂಡು ಭೂ ಪರಿಹಾರ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ಮೊತ್ತವನ್ನು ನಿಗಧಿಪಡಿಸಲು ಅಥವಾ ಭೂಮಾಲಕರು ಒಪ್ಪಿದಲ್ಲಿ ಟಿ.ಡಿ.ಆರ್ ನೀಡಲು ಬಿಡಿಎ ಸೆ.19ರಂದು ಹೊರಡಿಸಿದ್ದ ತಿದ್ದುಪಡಿ ಆದೇಶಕ್ಕೆ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸಮವಸ್ತ್ರ: 69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಐ.ಸಿ.ಡಿ.ಎಸ್ ಯೋಜನೆಯಡಿ ತಲಾ ಎರಡು ಸೀರೆಗಳಂತೆ ಒಟ್ಟು 2,75,018 ಸೀರೆಗಳನ್ನು ಖರೀದಿಸಲು 2024-25ನೆ ಸಾಲಿನ ಅನುದಾನದಿಂದ 13.75 ಕೋಟಿ ರೂ. ವೆಚ್ಚವನ್ನು ಭರಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಕಾನೂನು ಆಯೋಗ: ರಾಜ್ಯ ಕಾನೂನು ಆಯೋಗದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾನೂನು ಅಯೋಗದ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.