‘ಕಂಬಳ’ ಆಯೋಜಕರಿಗೆ ಅನುದಾನ ಬಿಡುಗಡೆಗೆ ಕ್ರಮ : ಸಚಿವ ಎಚ್.ಕೆ.ಪಾಟೀಲ್
ಬೆಂಗಳೂರು : ಕರಾವಳಿಯ ಪ್ರಮುಖ ಕ್ರೀಡೆಯಾದ ಕಂಬಳವನ್ನು 2023-24ನೆ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಸ್ಥಳಗಳಲ್ಲಿ ಆಯೋಜಿಸಿದ್ದು, ಅಧಿವೇಶನ ಮುಗಿಯುವುದರೊಳಗೆ ಕಂಬಳ ಆಯೋಜಕರಿಗೆ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ 2023-24ನೆ ಸಾಲಿನಲ್ಲಿ ಕಂಬಳ ಆಯೋಜಿಸಿದ್ದ ಆಯೋಜಕರಿಗೆ ಸರಕಾರ ಅನುದಾನ ಬಿಡುಗಡೆ ಮಾಡದೇ ವಿಳಂಬ ಮಾಡಿದೆ ಎಂದು ಗಮನ ಸೆಳೆದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಚಿವ ಎಚ್.ಕೆ.ಪಾಟೀಲ್, ಕಂಬಳ ಆಯೋಜಕರಿಗೆ ಅನುದಾನ ಬಿಡುಗಡೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮಾ.20ರೊಳಗೆ ಕಳುಹಿಸಬೇಕಿತ್ತು. ಆದರೆ ಅವರು ಮಾ.23ಕ್ಕೆ ಬಿಲ್ ಕಳುಹಿದ್ದರು. ಈ ತಾಂತ್ರಿಕ ಕಾರಣದಿಂದ ಹಣ ಪಾವತಿ ವಿಳಂಬವಾಗಿದೆ. ತಕ್ಷಣವೇ ಅನುದಾನ ಬಿಡುಗಡೆ ಮಾಡಲು ಇಲಾಖೆ ಕಾರ್ಯದರ್ಶಿಗೆ ಸೂಚಿಸುತ್ತೇನೆ ಎಂದರು.
ಪುತ್ತೂರಿನ ಕೋಟಿ ಚೆನ್ನಯ್ಯ ಕಂಬಳಕ್ಕೆ 5 ಲಕ್ಷ ರೂ., ಉಪ್ಪಿನಂಗಡಿ ವಿಜಯ ವಿಕ್ರಮ ಜೋಡಿಕೆರೆ ಕಂಬಳಕ್ಕೆ 10 ಲಕ್ಷ ರೂ. ಅನುದಾನವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಲಾಗುತ್ತದೆ. ಹಾಗೆಯೇ ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಕಂಬಳ ಕ್ರೀಡೆಯನ್ನು 5 ಕಡೆ ಕಂಬಳ ಆಯೋಜನೆ ಮಾಡಲಾಗುತ್ತದೆ. ಆಯೋಜಕರಿಗೆ ಸರಕಾರದಿಂದ ಎಲ್ಲ ರೀತಿಯ ಆರ್ಥಿಕ ನೆರವು ನೀಡುತ್ತೇವೆ. ಕಂಬಳಕ್ಕೆ ಅನುದಾನ ಹೆಚ್ಚಳ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.