ನಾನೇ ಕಾವಿ ಬಟ್ಟೆ ಹಾಕಿಕೊಳ್ಳುವೆ, ಸ್ವಾಮೀಜಿ ತಮ್ಮ ಸ್ಥಾನ ಬಿಟ್ಟು ಕೊಡುತ್ತಾರೆಯೇ? : ಸಚಿವ ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ
ಬೆಂಗಳೂರು: ‘ ಚಂದ್ರಶೇಖರ್ ಸ್ವಾಮೀಜಿ ಹೇಳಿದ ಕೂಡಲೇ ಸಿಎಂ ಸ್ಥಾನ ಬಿಟ್ಟುಕೊಡಲು ಆಗುತ್ತದೆಯೇ? ಮುಖ್ಯಮಂತ್ರಿ ಸ್ಥಾನವನ್ನು ಯಾರು ಬಿಟ್ಟು ಕೊಡಲು ಹೋಗ್ತಾರೆ?. ಆ ಸ್ವಾಮೀಜಿಯವರು ತಮ್ಮ ಸ್ಥಾನವನ್ನು ಬಿಟ್ಟು ಕೊಡುವರೇ?’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಗುರುವಾರ ನಗರದಲ್ಲಿ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಜಣ್ಣ, ‘ ಚಂದ್ರಶೇಖರ ಸ್ವಾಮೀಜಿಯವರನ್ನು ಕೇಳಿ ನೋಡಿ, ನಾನೇ ಸ್ವಾಮೀಜಿ ಆಗಲು ಸಿದ್ಧ. ನಾಳೆಯಿಂದಲೇ ನಾನು ಕಾವಿ ಬಟ್ಟೆ ಹಾಕಿಕೊಳ್ಳುತ್ತೇನೆ. ಅವರು ತಮ್ಮ ಸ್ಥಾನವನ್ನು ಬಿಟ್ಟು ಕೊಡುತ್ತಾರೆಯೇ?’ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಕೇಳಿದರು.
‘ಸಿದ್ದರಾಮಯ್ಯ ಅವರೂ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದಿಲ್ಲ. ಸ್ವಾಮೀಜಿಯವರು ಸಹ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಶ್ರೀಗಳು ಯಾವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ. ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ, ಮಾತನಾಡುತ್ತಾರೆ. ಮುಂದಿನ 10 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ’ ಎಂದು ರಾಜಣ್ಣ ಇದೇ ವೇಳೆ ಭವಿಷ್ಯ ನುಡಿದರು.
‘ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಆದರೆ, ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಬೇಕು. ಡಿ.ಕೆ.ಶಿವಕುಮಾರ್ ಅವರು ಹೇಳಿದ ಹಾಗೆ ನಾವು ಕೇಳಬೇಕು ಎಂದೇನು ಇಲ್ಲ. ನಮಗೂ ಸ್ವಂತ ಬುದ್ದಿ ಇದೆ. ನಾನು ಕಾನೂನು ಕೂಡ ಪದವೀಧರ. ಪ್ರಚಾರಕ್ಕೆ ಹೇಳಿಕೆ ನೀಡುತ್ತೇವೆಂದು ಹೇಳಿದರೆ ಅವರು ಹೇಳಿಕೊಳ್ಳಲಿ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ' ಎಂದು ರಾಜಣ್ಣ ಸ್ಪಷ್ಟನೆ ನೀಡಿದರು.
"ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ಮತ್ತು ಶಾಸಕರ ವೇದಿಕೆಯಲ್ಲಿ ತೀರ್ಮಾನ ಆಗುತ್ತದೆ. ಅದೂ ಒಂದು ಕಾಲ ಬರುತ್ತದೆ. ಎರಡು ವರ್ಷಕ್ಕೊ, ಎರಡೂವರೆ ವರ್ಷಕ್ಕೊ ಅದೆಲ್ಲ ಪಕ್ಷದ ವೇದಿಕೆಯಲ್ಲಿ ತೀರ್ಮಾನವಾಗುತ್ತದೆ. ಯಾರು ಮುಖ್ಯಮಂತ್ರಿ ಆಗಬೇಕು, ಸಚಿವರಾಗಬೇಕು ಎಂದು ಪಕ್ಷ ನಿರ್ಧರಿಸಲಿದೆ"
-ಎನ್.ಚೆಲುವರಾಯಸ್ವಾಮಿ ಕೃಷಿ ಸಚಿವ