ರೈತರ ಸಾಲಮನ್ನಾ ಪ್ರಸ್ತಾವ ಸರಕಾರದ ಮುಂದಿಲ್ಲ : ಸಚಿವ ಕೆ.ಎನ್.ರಾಜಣ್ಣ
ಬೆಂಗಳೂರು: ರೈತರ ಸಾಲಮನ್ನಾ ಮಾಡುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ. ಸಾಲದ ಬೇಡಿಕೆ ಸಲ್ಲಿಸುವ ಎಲ್ಲ ರೈತರಿಗೂ ಸಹಕಾರಿ ಸಂಘಗಳ ಹಣಕಾಸು ಲಭ್ಯತೆಯನುಸಾರ ಸಾಲ ನೀಡುವ ಪ್ರಯತ್ನ ನಡೆಸಲಾಗುತ್ತದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಹಕಾರಿ ಸಂಘಗಳಲ್ಲಿ ಕೃಷಿ ಸಾಲ ಕೊಡುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ 63 ಲಕ್ಷ ರೈತರಿದ್ದಾರೆ. ಅವರಲ್ಲಿ 29 ಲಕ್ಷ ರೈತರಿಗೆ ಸಾಲ ಕೊಡಲಾಗಿದೆ. ಹೊಸದಾಗಿ, 12,600 ಜನರಿಗೆ ಮಾತ್ರ ಸಾಲ ಕೊಡಲಾಗಿದೆ. ಆದರೆ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದರು.
2024-25ನೆ ಸಾಲಿನಲ್ಲಿ ಜೂನ್ ಅಂತ್ಯದ ವರೆಗೆ ಸಹಕಾರ ಸಂಘಗಳು ಹೊಸದಾಗಿ ಅರ್ಜಿ ಸಲ್ಲಿಸಿದ 9,797 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 93.49 ಕೋಟಿ ರೂ.ಗಳ ಬೆಳೆ ಸಾಲ ಮತ್ತು 2,815 ರೈತರಿಗೆ 138.36ಕೋಟಿ ರೂ.ಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಿದ್ದು, ಸಾಲ ಪಡೆಯುವ ರೈತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಕೃಷಿ ಸಾಲ ಹೆಚ್ಚಳಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿ.ಸಿ.ಸಿ ಬ್ಯಾಂಕುಗಳು ಹಾಗೂ ಪಿಕಾರ್ಡ್ ಬ್ಯಾಂಕುಗಳ ಮೂಲಕ 2024-25ನೇ ಸಾಲಿಗೆ 35.10 ಲಕ್ಷ ರೈತರಿಗೆ 25,000ಕೋಟಿ ರೂ.ಗಳ ಅಲ್ಪಾವಧಿ ಕೃಷಿ ಸಾಲ ಮತ್ತು 90 ಲಕ್ಷ ರೈತರಿಗೆ 2000 ಕೋಟಿ ರೂ.ಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಲು ಗುರಿ ನಿಗದಿಪಡಿಸಲಾಗಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.