32.12 ಲಕ್ಷ ರೈತರ ಖಾತೆಗಳಿಗೆ ಸಂಪೂರ್ಣ ಬೆಳೆಹಾನಿ ಪರಿಹಾರ ಜಮೆ : ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು : ಎನ್.ಡಿ.ಆರ್.ಎಫ್ ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ. ಇಲ್ಲಿಯವರೆಗೆ ಮೊದಲ ಹಂತದಲ್ಲಿ 2 ಸಾವಿರ ರೂ. ಮತ್ತು ಎರಡನೇ ಕಂತಿನ ಪರಿಹಾರವೂ ಸೇರಿದಂತೆ ಒಟ್ಟು 32.12 ಲಕ್ಷ ರೈತರ ಖಾತೆಗೆ ಈ ದಿನದವರೆಗೆ ಸಂಪೂರ್ಣ ಬೆಳೆ ಪರಿಹಾರ ಜಮೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, "ಇನ್ನೂ ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ. ಇದಲ್ಲದೆ, ಸುಮಾರು ತಾಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ, ಸಣ್ಣ ಮತ್ತು ಅತಿಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯದ ನಷ್ಟಕ್ಕೆ ಪರಿಹಾರವಾಗಿ ತಲಾ 3 ಸಾವಿರ ರೂ. ಪರಿಹಾರ ನೀಡಲೂ ತೀರ್ಮಾನಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ನೀರು ಮತ್ತು ಮೇವಿನ ನಿರ್ವಹಣೆಗಾಗಿ ಇಲ್ಲಿಯವರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 202 ಸಭೆಗಳನ್ನು ನಡೆಸಲಾಗಿದೆ ಹಾಗೂ 462 ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಲಾಗಿದೆ. ನೀರಿನ ಸಮಸ್ಯೆಯಿಂದ 270 ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ಮತ್ತು 594 ಗ್ರಾಮಗಳಿಗೆ ಖಾಸಗಿ ಬೋರ್ ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
153 ನಗರ ಪ್ರದೇಶದ ವಾರ್ಡ್‍ಗಳಿಗೆ ಟ್ಯಾಂಕರ್ ಮುಖಾಂತರ ಮತ್ತು 35 ವಾರ್ಡ್‍ಗಳಿಗೆ ಖಾಸಗಿ ಬೋರ್‍ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ವಿವಿಧ ಭಾಗಗಳಲ್ಲಿ 47 ಮೇವಿನ ಬ್ಯಾಂಕ್‍ಗಳನ್ನು ಮತ್ತು 28 ಕಡೆಗಳಲ್ಲಿ ಗೋಶಾಲೆಗಳನ್ನು ತೆರೆದು ಮೇವಿನ ಕೊರತೆ ನೀಗಿಸಲಾಗುತ್ತಿದೆ. ಈ ವೆಚ್ಚವನ್ನು ಬರಿಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರ ಖಾತೆಗಳಲ್ಲಿ 836 ಕೋಟಿ ಅನುದಾನ ಲಭ್ಯವಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.