‘ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ’ ಕರ್ನಾಟಕ ದೇಶಕ್ಕೆ ಮಾದರಿ : ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು : ಶಾಲಾ ಮಕ್ಕಳಿಗೆ ಮಧ್ಯಾಹ್ನದ ಪೌಷ್ಠಿಕಾಂಶಯುಕ್ತ ಬಿಸಿಯೂಟ ನೀಡುವ ಯೋಜನೆಯಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಸೋಮವಾರ ಬ್ಯಾಟರಾಯನಪುರ ಕ್ಷೇತ್ರದ ಚಿಕ್ಕಜಾಲದಲ್ಲಿ ಅಕ್ಷಯ ಪಾತ್ರ ಫೌಂಡೇಷನ್ ಆರಂಭಿಸಿರುವ 75ನೇ ಅಡಿಗೆ ಮನೆ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಕಾಮರಾಜರ್ ಅವರು ದೇಶದಲ್ಲೇ ಮೊದಲು ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಯೋಜನೆ ಜಾರಿಗೊಳಿಸಿದ್ದರು ಎಂದರು.
ಆದರೆ, ಇಡೀ ದೇಶಕ್ಕೆ ಬೆಳಕನ್ನು ಹರಿಸಿ ಎಲ್ಲ ರಾಜ್ಯಗಳ ಕಣ್ಣು ತೆರೆಯುವಂತೆ ಮಾಡಿ ಸುಪ್ರೀಂಕೋರ್ಟ್‍ನಿಂದಲೂ ಮೆಚ್ಚುಗೆ ಗಳಿಸಿದ್ದು ಮಾತ್ರ ಕರ್ನಾಟಕದ ಬಿಸಿಯೂಟ ಯೋಜನೆ. ಎಸ್.ಎಂ.ಕೃಷ್ಣಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಪ್ರತಿ ಹಳ್ಳಿ ಹಳ್ಳಿಯ ಶಾಲಾ ಮಕ್ಕಳಿಗೂ ಪೌಷ್ಠಿಕಾಂಶಯುಕ್ತ ಆಹಾರವನ್ನು ಪೂರೈಕೆ ಮಾಡಲಾಗಿತ್ತು ಎಂದು ಅವರು ಸ್ಮರಿಸಿದರು.
ಅದರ ಪರಿಣಾಮ ಈ ಯೋಜನೆಯನ್ನೇ ಉದಾಹರಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ಆರಂಭವಾದ ಈ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ, ಈ ಮಾದರಿ ಯೋಜನೆಯನ್ನು ಏಕೆ ದೇಶದಾದ್ಯಂತ ಜಾರಿಗೆ ತರಬಾರದು? ಎಂದು ಪ್ರಶ್ನಿಸಿದ ನಂತರ ಇಂದು ಇಡೀ ದೇಶದಾದ್ಯಂತ ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸಲಾಯಿತು ಎಂದು ಅವರು ತಿಳಿಸಿದರು.
ದೇಶದಲ್ಲಿ ಲಕ್ಷಾಂತರ ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಾರೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಪಾಲಿಗೆ ಬಿಸಿಯೂಟ ಯೋಜನೆ ವರದಾನವಾಗಿದೆ. ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಕಾಂಗ್ರೆಸ್ ಸರಕಾರ ಮತ್ತು ನಮ್ಮ ಹಿರಿಯ ನಾಯಕರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂದು ಕೃಷ್ಣ ಬೈರೇಗೌಡ ಸ್ಮರಿಸಿದರು.
ಅಕ್ಷಯ ಪಾತ್ರ ಫೌಂಡೇಷನ್ ನಡೆಸುತ್ತಿರುವ ಉತ್ತಮ ಕೆಲಸಗಳ ಬಗ್ಗೆಯೂ ಮೆಚ್ಚುಗೆ ಸೂಚಿಸಿದ ಅವರು, ರಾಜ್ಯದಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಸರಕಾರದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುತ್ತಿದೆ. ಕರ್ನಾಟಕದಿಂದ ಆರಂಭವಾದ ಇವರ ಕೆಲಸ ಇಂದು ದೇಶದ 16 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಕ್ಕೂ ವ್ಯಾಪಿಸಿದೆ. ದೇಶದ ಒಟ್ಟು 2.20 ಕೋಟಿ ಮಕ್ಕಳಿಗೆ ಅಕ್ಷಯ ಪಾತ್ರ ಫೌಂಡೇಶನ್ ಬಿಸಿಯೂಟ ನೀಡುತ್ತಿರುವುದು ಸಣ್ಣ ಮಾತಲ್ಲ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಜಾಲದಲ್ಲಿರುವ ಈ ಅಡುಗೆಮನೆಯು 200ಕ್ಕೂ ಹೆಚ್ಚು ಸರಕಾರಿ ಶಾಲೆಗಳಲ್ಲಿ 35 ಸಾವಿರ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ನೀಡಲು ವಿನ್ಯಾಸಗೊಳಿಸಿದ ಬೆಂಗಳೂರಿನ 5 ನೇ ಅಡುಗೆಮನೆಯಾಗಿದ್ದು, ಅಗತ್ಯವಿದ್ದಾಗ 70 ಸಾವಿರ ಮಕ್ಕಳಿಗೆ ಊಟ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಅಧ್ಯಕ್ಷ ಮಧು ಪಂಡಿತ್, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಶಿಕ್ಷಣ ಇಲಾಖೆ ಆಯುಕ್ತೆ ಕಾವೇರಿ ಉಪಸ್ಥಿತರಿದ್ದರು.