ಪ್ರಜ್ಜಲ್ ಪ್ರಕರಣದಲ್ಲಿ ನೂರಾರು ಹಿಂದೂ ಮಹಿಳೆಯರ ಮಾಂಗಲ್ಯ, ಮಾನಹರಣ : ಸಚಿವ ಕೃಷ್ಣಬೈರೇಗೌಡ
"ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವುದರ ಜೊತೆಗೆ ಸಂತ್ರಸ್ತೆಯರ ರಕ್ಷಣೆಯೂ ಸರಕಾರದ ಹೊಣೆ"
Photo : x/@INCKarnataka
ಬೆಂಗಳೂರು : ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನೂರಾರು ಹಿಂದೂ ಮಹಿಳೆಯರ ಮಾಂಗಲ್ಯ, ಮಾನ, ಶೀಲಹರಣ, ಮನೆ ಹಾಳು ಮಾಡಿರುವ ಪ್ರಕರಣ ಇದಾಗಿದೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣದ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಆಕ್ರೋಶ ಹೊರ ಹಾಕಿದರು.
ಬುಧವಾರ ನಗರದ ಕ್ವೀನ್ಸ್ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನು ರಕ್ಷಿಸಲು ಹುನ್ನಾರ ನಡೆಯುತ್ತಿದೆ. ಆದುದರಿಂದಲೆ, ಪ್ರಕರಣದ ಮೂಲವನ್ನು ಬಿಟ್ಟು ಈಗ ಪೆನ್ಡ್ರೈವ್ ಬಿಡುಗಡೆ ಮಾಡಿದ ಬಗ್ಗೆ ಚರ್ಚಿಸಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜ್ವಲ್ ಪ್ರಕರಣದಲ್ಲಿ ಮಹಿಳೆಯರ ಮಾನಹರಣ ಆಗಿರುವುದೇ ಬಿಜೆಪಿ-ಜೆಡಿಎಸ್ ನಾಯಕರ ಕೊಳಕು ರಾಜಕಾರಣದಿಂದ. ತಾಯಿ ಮಗಳ ಮೇಲೆ ಕಣ್ಣುಹಾಕಿ-ಅಪಹರಣ ಮಾಡಿ ಅಂತ ಕಾಂಗ್ರೆಸ್ ಹೇಳಿತ್ತಾ?. ಪ್ರಜ್ವಲ್ ಮಾಡಿದ್ದು ಅಕ್ಷಮ್ಯ ಅಪರಾಧ ಅಂತ ದೇವೇಗೌಡರ ಕುಟುಂಬದಿಂದ ಯಾರಾದರೂ ಖಂಡಿಸಿದ್ದಾರೆಯೆ? ಎಂದು ಅವರು ಪ್ರಶ್ನಿಸಿದರು.
ಸಂತ್ರಸ್ತರ ಮನೆಯಲ್ಲಿ-ಊರಲ್ಲಿ ಎಂತಹಾ ಪರಿಸ್ಥಿತಿ ಇದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಪ್ರಕರಣದ ದಿಕ್ಕು ತಪ್ಪಿಸುವುದು ಅನಾಗರಿಕ ವರ್ತನೆ. ಅನೇಕ ಹೆಣ್ಣು ಮಕ್ಕಳ ಭವಿಷ್ಯ ಮಂಕಾಗಿ ಹೋಗಿದೆ. ಅನೇಕರು ಊರು ಬಿಟ್ಟು ಹೋಗಿದ್ದಾರೆ. ಇಂತಹ ಹೆಣ್ಣು ಮಕ್ಕಳ ಮಾನ ಕಾಪಾಡುವುದು ಬಿಟ್ಟು ಪ್ರಕರಣದ ಹಾದಿ ತಪ್ಪಿಸುವುದ ನಿಲ್ಲಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಇಲ್ಲಿ ತಪ್ಪು ಮಾಡಿದವರಿಗೆ, ಮಾನ ಹಾನಿ ಮಾಡಿದವರಿಗೆ ಶಿಕ್ಷೆ ಆಗಬೇಕು. ಆದರೆ ಮಾನ, ಮನೆ, ಮಾಂಗಲ್ಯ ದೋಚಿದ್ದು ಅಪರಾಧ ಅಲ್ಲ, ಇದರ ವಿರುದ್ಧ ಮಾತನಾಡಿದ್ದು ಅಪರಾಧವಾಗಿದೆ. ಮೂಲ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಸಂತ್ರಸ್ಥರ ಮಾನ ಹರಣವಾಗಿದೆ. ಈಗ ನ್ಯಾಯ ಹರಣ ಮಾಡಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಮಹಿಳೆಯರ ಮಾನದ ಬಗ್ಗೆ ಮಾತನಾಡಬೇಕಾಗಿತ್ತು, ಆದರೆ ಬೇರೆಯದೆ ವಿಚಾರ ಚರ್ಚೆ ಆಗುತ್ತಿದೆ. ಪ್ರಕರಣದ ಆರೋಪಿಯ ಬಳಿ ಕೆಲಸ ಮಾಡುತ್ತಿದ್ದವನು ಬಿಜೆಪಿ ನಾಯಕನಿಗೆ ಪೆನ್ಡ್ರೈವ್ ಕೊಟ್ಟು ಒಂದು ವರ್ಷದ ಮೇಲಾಗಿದೆ. ಆ ಬಿಜೆಪಿ ನಾಯಕ ನ್ಯಾಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ವಕೀಲ ಕೂಡ ಎಂದು ಅವರು ತಿಳಿಸಿದರು.
ಆ ವಕೀಲ ಮೊದಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಗಮನಕ್ಕೆ ತಂದಿದ್ದರೆ ಹಾದಿಬೀದಿಯಲ್ಲಿ ಯಾರ ಮಾನವೂ ಹರಾಜಾಗುತ್ತಿರಲಿಲ್ಲ. ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಮುಚ್ಚಿದ ಲಕೋಟೆಯಲ್ಲಿ ಆ ಪೆನ್ಡ್ರೈವ್ ನೀಡಬಹುದಿತ್ತು. ಅಪರಾಧವನ್ನು ಮುಚ್ಚಿಟ್ಟಿರುವುದು ಕೂಡ ಅಷ್ಟೇ ದೊಡ್ಡ ಅಪರಾಧ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಪೆನ್ಡ್ರೈವ್ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುವ ವ್ಯಕ್ತಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚರ್ಚೆ ಮಾಡಿದವರು ಹಾಸನಾಂಭ ದೇವಸ್ಥಾನಕ್ಕೆ ಬಂದು ದೇವರ ಮೇಲೆ ಕೈಯಿಟ್ಟು ಪ್ರಮಾಣ ಮಾಡಲಿ. ಲೋಕಸಭೆ ಚುನಾವಣೆಯ ಟಿಕೆಟ್ ತಪ್ಪಿಸಲು ಇದನ್ನು ಬಳಸಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.
ಬಿಜೆಪಿಯವರು ಇವರ ಬಳಿ ಇರುವ ಅಷ್ಟು ಮತಗಳನ್ನು ಹಾಕಿಸಿಕೊಂಡು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸು ಎಂದು ಕಾಂಗ್ರೆಸ್ ಹೇಳಿತ್ತೇ?. ಅರವತ್ತು ವರ್ಷದ ಮಹಿಳೆಯನ್ನು ಅಪಹರಣ ಮಾಡಲು ಕಾಂಗ್ರೆಸ್ ಹೇಳಿತ್ತೇ? ಅಪಹರಣ ಮಾಡಿದ್ದೂ ಸುಳ್ಳು ಎಂದು ಹೇಳುತ್ತಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಅವರು ಹರಿಹಾಯ್ದರು.
ಇವರು ಏನೂ ಮಾಡಿದರೂ ನಡೆಯುತ್ತದೆ. ಕಾನೂನಿಗಿಂತ, ಸಂವಿಧಾನಕ್ಕಿಂತ ಮೇಲೆ ಎಂದುಕೊಂಡಿದ್ದಾರೆ. ಅವರ ಕುಟುಂಬದಲ್ಲಿ ಒಬ್ಬರಾದರೂ ಈ ಘಟನೆಯನ್ನು ಖಂಡಿಸಿಲ್ಲ. ಎಲ್ಲೊ ಇರುವ ಆರೋಪಿಯನ್ನು ಕರೆಸಿ ವಿಚಾರಣೆಗೆ ಒಳಗಾಗು, ನೀನು ತಪ್ಪು ಮಾಡಿಲ್ಲದಿದ್ದರೆ ಆರೋಪಮುಕ್ತವಾಗಿ ಹೊರಗೆ ಬರುತ್ತೀಯಾ ಎಂದು ಯಾಕೆ ಆತನನ್ನು ಕರೆಸುತ್ತಿಲ್ಲ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವುದರ ಜೊತೆಗೆ ಸಂತ್ರಸ್ತರ ರಕ್ಷಣೆಯೂ ಸರಕಾರದ ಹೊಣೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ. ಅನಗತ್ಯವಾಗಿ ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರನ್ನು ಎಳೆದು ತರುವುದು ಸರಿಯಲ್ಲ ಎಂದು ಅವರು ಹೇಳಿದರು.