ಅಂಗನವಾಡಿ ಹೆಸರು ಬದಲಾವಣೆಗೆ ಸರಕಾರ ಚಿಂತನೆ ನಡೆಸಿದೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
"ಅಂಗನವಾಡಿ ಕಾರ್ಯಕರ್ತೆಯರ ಹಿತರಕ್ಷಣೆಗೆ ಸರಕಾರ ಬದ್ಧ"
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಹಿತರಕ್ಷಣೆಗೆ ಸರಕಾರ ಬದ್ಧವಾಗಿದ್ದು, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನ ಗೃಹ ಕಚೇರಿಯಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ಕಾರ್ಯಕರ್ತರು ಭೇಟಿ ಮಾಡಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಲ್ಲಿಸಿದ ಮನವಿ ಸ್ವೀಕರಿಸಿ ಬಳಿಕ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಅವರು ಒಪ್ಪಿಗೆ ಸೂಚಿಸಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ಸರಕಾರ ತೀರ್ಮಾನಿಸಿದ್ದು, ಇದರಿಂದ ಅಂಗನವಾಡಿ ಶಿಕ್ಷಕರಿಗೆ ತೊಂದರೆ ಆಗುವುದಿಲ್ಲ. ನಿಮ್ಮ ಹಾಗೂ ಮಕ್ಕಳ ಇಬ್ಬರ ಹಿತದೃಷ್ಟಿಯಿಂದ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರ ಕಳವಳ ಅರ್ಥ ಆಗುತ್ತದೆ. ಆದರೆ, ಈಗಾಗಲೇ ಅಂಗನವಾಡಿ ಕೇಂದ್ರಗಳ ಅಸ್ತಿತ್ವದ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಕಾರ್ಯಕರ್ತೆಯರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಅವರು ಅಭಯ ನೀಡಿದರು.
ಹೆಸರು ಬದಲಾವಣೆಗೆ ಚಿಂತನೆ: ಅಂಗನವಾಡಿ ಮಕ್ಕಳಿಗೆ ಬ್ಯಾಗ್, ಯೂನಿಫಾರ್ಮ್ ಕೊಡುವ ಬಗ್ಗೆ ತೀರ್ಮಾನಿಸಿದೆ. ಮಾಂಟೆಸ್ಸರಿ ತರಗತಿಗಳು ಆರಂಭಗೊಂಡ ನಂತರ ಅಂಗನವಾಡಿ ಹೆಸರನ್ನು ಬದಲಿಸಲು ಸರಕಾರ ಚಿಂತನೆ ನಡೆಸಿದೆ. ರಾಜ್ಯದ ಅಂಗನವಾಡಿ ಕೇಂದ್ರಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು, ಅಂಗನವಾಡಿ ಕಾರ್ಯಕರ್ತರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.