ಪ್ರಧಾನಿ ಮೋದಿ ಚುನಾವಣೆ ಕಾರಣಕ್ಕೆ ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಕಾರುತ್ತಿರುವುದು ಆತಂಕಕಾರಿ : ಸಚಿವ ಮಹದೇವಪ್ಪ
ಬೆಂಗಳೂರು : ಇತ್ತೀಚೆಗೆ ಅಂಬೇಡ್ಕರ್ ಮೇಲೆ ನಕಲಿ ಪ್ರೀತಿ ತೋರುತ್ತಿರುವ ಪ್ರಧಾನಿ ಮೋದಿ, ಅವರ ಮಾತುಗಳನ್ನು ಗಾಳಿಗೆ ತೂರಿ ತಾನೊಬ್ಬ ಎಲ್ಲ ಸಮುದಾಯಗಳ ಪ್ರಧಾನಿ ಎಂಬುದನ್ನು ಮರೆತು, ಚುನಾವಣೆಯ ಕಾರಣಕ್ಕೆ ಮುಸ್ಲಿಂ ಸಮುದಾಯಗಳ ವಿರುದ್ದ ದ್ವೇಷ ಕಾರುತ್ತಿರುವುದು ಆತಂಕಕಾರಿ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಈ ದೇಶದ ಅಲ್ಪಸಂಖ್ಯಾತರು, ಇಲ್ಲಿನ ಬಹುಸಂಖ್ಯಾತರ ಮೇಲೆ ನಂಬಿಕೆಯಿಟ್ಟು ಜೀವಿಸಲು ನಿರ್ಧರಿಸಿದ್ದಾರೆ. ನಮ್ಮ ಮೇಲೆ ವಿಶ್ವಾಸವಿಟ್ಟ ಅವರೊಂದಿಗೆ ಸೌಹಾರ್ದತೆಯಿಂದ ಇದ್ದು ಅವರನ್ನು ಕಾಪಾಡಬೇಕಾದ್ದು ಭಾರತೀಯರಾದ ನಮ್ಮ ಜವಾಬ್ದಾರಿ ಎಂದು ಅಂಬೇಡ್ಕರ್ ಹೇಳಿದ್ದರು.
ಮೀಸಲಾತಿಯು ದೌರ್ಜನ್ಯ ಹಾಗೂ ಅವಮಾನಕ್ಕೆ ಒಳಗಾದ ಜನ ಸಮುದಾಯಕ್ಕೆ ನೀಡಬೇಕಾದ ಅಂಶ ಎಂಬ ಸಂಗತಿಯು ಸಂವಿಧಾನದಲ್ಲಿ ಸ್ಪಷ್ಟವಾಗಿದ್ದರೂ ಅದನ್ನು ಬದಿಗೆ ತಳ್ಳಿ ಇಡಬ್ಲೂಎಸ್ ಹೆಸರಿನಲ್ಲಿ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ಘೋಷಿಸಿದ್ದ ಪ್ರಧಾನಿ ಮೋದಿ ಇದೀಗ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಾನು ಮೀಸಲಾತಿಯ ಪರವಾಗಿದ್ದೇನೆ ಎಂದು ಹೇಳುತ್ತಿರುವುದು ನಿಜಕ್ಕೂ ಬೇಜವಾಬ್ದಾರಿ ಪ್ರತೀಕ ಎಂದು ಸಚಿವ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ವಿರೋಧಿ ತಂತ್ರವನ್ನು ಪಾಲಿಸುತ್ತಿದ್ದ ಮತ್ತು ನಾವು ಇರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುವಂತಹ ಸಂಸದರು ಮತ್ತು ಸಚಿವರನ್ನು ತಮ್ಮ ಸಂಪುಟದಲ್ಲಿ ಇಟ್ಟುಕೊಂಡಿರುವ ಪ್ರಧಾನಿ ಮೂಲತಃ ಮೀಸಲಾತಿಯ ವಿರೋಧಿಯೇ ಆಗಿದ್ದು, ಚುನಾವಣಾ ಕಾರಣಕ್ಕಾಗಿ ಸಂವಿಧಾನದ ರಕ್ಷಣೆ ಎಂಬ ಪದವನ್ನು ಬಳಸುತ್ತಿರುವ ಇವರ ಕುತಂತ್ರದ ಮಾತುಗಳನ್ನು ಯಾರೂ ನಂಬಬಾರದು ಎಂದು ಅವರು ಹೇಳಿದ್ದಾರೆ.