ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ 146ನೆ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ
3,587 ಕೋಟಿ ರೂ.ಬಂಡವಾಳ ಹೂಡಿಕೆಯ 64 ಯೋಜನೆಗಳಿಗೆ ಅನುಮೋದನೆ
Photo :x/@MBPatil
ಬೆಂಗಳೂರು: ಇಂಟರ್ ನ್ಯಾಷನಲ್ ಬ್ಯಾಟರಿ ಕಂಪೆನಿ ಇಂಡಿಯಾ, ರಿವರ್ ಮೊಬಿಲಿಟಿ, ವೆಗಾ ಆಟೊ ಆಕ್ಸೆಸರೀಸ್, ಮಿರ್ರಾ ಆಂಡ್ ಮಿರ್ರಾ ಇಂಡಸ್ಟ್ರೀಸ್ ಸೇರಿದಂತೆ ಒಟ್ಟಾರೆ 64 ಯೋಜನೆಗಳ 3,587 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗೆ ಶುಕ್ರವಾರ ನಡೆದ 146ನೆ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಅನುಮೋದನೆ ಪಡೆದ ಯೋಜನೆಗಳಲ್ಲಿ ವಿದ್ಯುತ್ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ, ವಿದ್ಯುತ್ ಉತ್ಪಾದನಾ ಕೇಂದ್ರ ಹಾಗೂ ಹಾಲು ಉತ್ಪಾದನಾ ಘಟಕಗಳು ಸೇರಿವೆ ಎಂದು ತಿಳಿಸಲಾಗಿದೆ
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀಡಿರುವ ಅನುಮೋದನೆಗಳಿಂದ ರಾಜ್ಯದಲ್ಲಿ 13,896 ಜನರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಗೊತ್ತಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಬೆಳಗಾವಿ, ತುಮಕೂರು, ಯಾದಗಿರಿ, ಹಾವೇರಿ, ಗದಗ, ಮೈಸೂರು ಜಿಲ್ಲೆಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ದೊರೆಯಲಿರುವುದರ ಜೊತೆಗೆ ಹೊಸ ಉದ್ಯೋಗ ಅವಕಾಶಗಳೂ ಸೃಷ್ಟಿಯಾಗಲಿವೆ.
ಇಂಟರ್ ನ್ಯಾಷನಲ್ ಬ್ಯಾಟರಿ ಕಂಪೆನಿ ಇಂಡಿಯಾ ಪ್ರೈವೇಟ್ ಲಿ.ದೇವನಹಳ್ಳಿ ಬಳಿ 390ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲಿರುವ ಪ್ರೈಮರಿ ಸೆಲ್ಸ್ ಆಂಡ್ ಬ್ಯಾಟರೀಸ್ ಘಟಕವು 300ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲಿದೆ. ಬೆಂಗಳೂರು ಮೂಲದ ರಿವರ್ ಮೊಬಿಲಿಟಿ ಪ್ರೈವೇಟ್ ಲಿ.ನವೋದ್ಯಮವು ಹೊಸಕೋಟೆ ಬಳಿ 306.9 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ ಸ್ಥಾಪಿಸಲಿದೆ. ಇದರಿಂದ 690 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ವೆಗಾ ಆಟೊ ಆಕ್ಸೆಸರೀಸ್ ಪ್ರೈವೇಟ್ ಲಿ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಇಪಿಎಸ್ ಲೀನರ್ ತಯಾರಿಕಾ ಘಟಕ ಸ್ಥಾಪಿಸಲು 205ಕೋಟಿ ರೂ.ವೆಚ್ಚ ಮಾಡಲಿದೆ. ಮಿರ್ರಾ ಆಂಡ್ ಮಿರ್ರಾ ಇಂಡಸ್ಟ್ರೀಸ್ ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ ಉಕ್ಕಿನ ತಂತಿ ಸಂಸ್ಕರಣಾ ಘಟಕ ಸ್ಥಾಪಿಸಲು 200 ಕೋಟಿ ರೂ.ವೆಚ್ಚ ಹೂಡಿಕೆ ಮಾಡಲಿರುವುದು ಪ್ರಮುಖ ಯೋಜನೆಗಳಾಗಿವೆ ಎಂದು ಎಂ.ಬಿ.ಪಾಟೀಲ್ ಸಭೆಯ ನಂತರ ಮಾಹಿತಿ ನೀಡಿದರು.