‘1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಕರ್ನಾಟಕ’ | ಪ್ರಗತಿ ಕೇಂದ್ರಿತ ಹೊಸ ಕೈಗಾರಿಕಾ ನೀತಿ : ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ (85 ಲಕ್ಷ ಕೋಟಿ ರೂ.) ಆರ್ಥಿಕವಾಗಿ ಬೆಳೆಸುವ ಗುರಿಯೊಂದಿಗೆ ಉದ್ಯಮ ಪರಿಣಿತರ ಆಧಾರದ ಮೇಲೆ 2025-30ರ ಅವಧಿಗೆ ಪ್ರಗತಿ ಕೇಂದ್ರಿತ ಕೈಗಾರಿಕಾ ನೀತಿ ರೂಪಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಅಮೆರಿಕ ಚೇಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾ (ಆಮ್ ಚಾಮ್) ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ 'ಪರಿವರ್ತನೆಯಾಗುತ್ತಿರುವ ಕರ್ನಾಟಕ' ಕಾರ್ಯಕ್ರಮದಲ್ಲಿ ಅವರು ಪ್ರಕಟಿಸಿದ್ದಾರೆ.
ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿಗೆ ಅವಕಾಶ ಇರುವಂತಹ ನೀತಿಯನ್ನು ರೂಪಿಸುತ್ತದೆ. ಈ ಎಲ್ಲಾ ವಲಯಗಳ ಉದ್ದಿಮೆದಾರರು ನೀತಿ ರೂಪಿಸುವಲ್ಲಿ ಸಹಕರಿಸಬೇಕು. ಎಲ್ಲ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿ ಎಂದು ಅವರು ಹೇಳಿದರು.
ಆರ್ಥಿಕತೆಯ ಗುರಿಗೆ ಹೆಚ್ಚಿನ ಸಹಭಾಗಿತ್ವಗಳನ್ನು ಸಾಧಿಸಲಾಗುತ್ತದೆ. ಜೊತೆಗೆ, ಮೂಲಸೌಕರ್ಯ, ಕೌಶಲಾಭಿವೃದ್ಧಿ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿನ ಕೊರತೆಗಳನ್ನು ನಿವಾರಿಸಲು ಒತ್ತು ನೀಡಲಾಗುವುದು.ಹೊಸದಾಗಿ ಸ್ಥಾಪನೆಯಾಗುತ್ತಿರುವ ಉದ್ದಿಮೆಗಳ ಬೇಡಿಕೆಗಳನ್ನು ಒದಗಿಸಲು ನಮ್ಮ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲು ಗಮನ ಕೇಂದ್ರೀಕರಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಪ್ರಕಟಿಸಿದ್ದಾರೆ.
ಸರ್ಕಾರಿ ಸಂಸ್ಥೆಗಳ ನೆರವಿನಿಂದ ಸಮಗ್ರ ಕೌಶಲ ಕೊರತೆ ಅಧ್ಯಯನ ನಡೆಸಲಾಗಿದೆ. ಈ ಮೂಲಕ, ಪ್ರಸ್ತುತ ಇರುವ ಕೌಶಲಗಳು ಹಾಗೂ ಉದ್ದಿಮೆಗಳಿಗೆ ಕೌಶಲಗಳನ್ನು ಗುರುತಿಸಲಾಗಿದೆ. ಇದನ್ನು ಆಧರಿಸಿ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕೇವಲ ಆರ್ಥಿಕ ಬೆಳವಣಿಗೆಯಲ್ಲಿದೆ ನಮ್ಮ ವಿವಿಧ ಸಮುದಾಯಗಳ ಜನರನ್ನು ಮೇಲೆತ್ತುವಂಥ ಅವಕಾಶಗಳ ಸೃಷ್ಟಿಗೆ ಸರಕಾರ ಆದ್ಯತೆ ನೀಡಲಿದೆ. ಯುವ ಜನತೆಯ ಸಬಲೀಕರಣದ ಮೂಲಕ ರಾಜ್ಯದಲ್ಲಿ ಎಲ್ಲರನ್ನೂ ಒಳಗೊಳ್ಳುವ ಮೂಲಕ ಪ್ರಗತಿ ಸಾಧಿಸುವುದು ನಮ್ಮ ಉದ್ದೇಶವಾಗಿದೆ. ಉದ್ಯಮದ ನಿರೀಕ್ಷೆ ಹಾಗೂ ನಾಗರಿಕರ ನಿರೀಕ್ಷೆ ಇರುವುದಕ್ಕೆ ಸೂಕ್ತವಾದ ಪರಿಸರ ಸೃಷ್ಟಿಸುತ್ತದೆ ಎಂದು ಎಂ.ಬಿ.ಪಾಟೀಲ್ ನುಡಿದರು.
ಅಮೆರಿಕ ಚೇಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾದ (ಆಮ್ ಚಾಮ್) ರಂಜನಾ ಖನ್ನಾ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ಸೆಲ್ವಕುಮಾರ್ ಸೇರಿದಂತೆ ವಿವಿಧ ಉದ್ಯಮಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.