ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಮುಂಬೈಗೆ ಸಚಿವ ಎಂ.ಬಿ.ಪಾಟೀಲ ಭೇಟಿ
ಟಾಟಾ, ಜಿಂದಾಲ್, ಮಹೀಂದ್ರ ಸೇರಿದಂತೆ ದಿಗ್ಗಜ ಉದ್ಯಮಿಗಳ ಜತೆ ಮಾತುಕತೆ
ಮುಂಬೈ: ಕರ್ನಾಟಕಕ್ಕೆ ಬಂಡವಾಳ ಆಕರ್ಷಿಸುವ ಉದ್ದೇಶದೊಂದಿಗೆ ಮುಂಬೈಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಮಂಗಳವಾರ ಹಲವು ಕಂಪೆನಿಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.
ತಮ್ಮ ಪ್ರವಾಸದ ಮೊದಲ ದಿನದಂದು ಅವರು ಮಹೀಂದ್ರ, ಜಿಂದಾಲ್ ಸ್ಟೀಲ್ ವಕ್ರ್ಸ್ (ಜೆಎಸ್‍ಡಬ್ಲ್ಯು), ಟಾಟಾ, ಬ್ಲ್ಯಾಕ್ ಸ್ಟೋನ್ ಮತ್ತು ಆರ್ ಪಿಜಿ ಗ್ರೂಪ್ ನ ಪ್ರಮುಖರನ್ನು ಭೇಟಿ ಮಾಡಿ, ರಾಜ್ಯದಲ್ಲಿರುವ ಹೂಡಿಕೆಗೆ ಪೂರಕವಾದ ನೀತಿ, ಉತ್ತೇಜನ, ಪ್ರೋತ್ಸಾಹನಾ ಕ್ರಮಗಳು, ವಿಶೇಷ ರಿಯಾಯಿತಿಗಳು, ಸೌಲಭ್ಯಗಳೆಲ್ಲವನ್ನೂ ವಿವರಿಸಿದರು.
ಈ ಮಹತ್ವಾಕಾಂಕ್ಷಿ ಮಾತುಕತೆಯಲ್ಲಿ ಮಹೀಂದ್ರ ಸಮೂಹದ ಪರವಾಗಿ ಅದರ ಅಂಗಸಂಸ್ಥೆಗಳಾದ ಆಟೋ ಅಂಡ್ ಫಾರಂ ವಿಭಾಗದ ಅಧ್ಯಕ್ಷ ವಿನೋದ್ ಸಹಾಯ್, ಜಿಂದಾಲ್ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಮತ್ತು ಪಾರ್ಥ ಜಿಂದಾಲ್, ಟಾಟಾ ಸಮೂಹದ ಮುಖ್ಯಸ್ಥ ಎನ್.ಚಂದ್ರಶೇಖರನ್, ಆರ್ ಪಿಜಿ ಸಮೂಹದ ಉಪಾಧ್ಯಕ್ಷ ಅನಂತ್ ಗೊಯೆಂಕಾ ಪಾಲ್ಗೊಂಡಿದ್ದರು.
ಸಚಿವರು ಬುಧವಾರ ಕೂಡ ಬಿರ್ಲಾ ಮತ್ತು ರಿಲಯನ್ಸ್ ಉದ್ಯಮ ಸಮೂಹ ಸೇರಿದಂತೆ ಹಲವು ಕಂಪೆನಿಗಳ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ.
ಸಚಿವ ಪಾಟೀಲರು ಇತ್ತೀಚೆಗೆ ರಾಜ್ಯಕ್ಕೆ ಬಂಡವಾಳ ಆಕರ್ಷಿಸಬೇಕೆಂಬ ಉದ್ದೇಶದೊಂದಿಗೆ ಅಮೆರಿಕಕ್ಕೆ 12 ದಿನಗಳ ಭೇಟಿ ನೀಡಿ, 25ಕ್ಕೂ ಹೆಚ್ಚು ಕಂಪೆನಿಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದರು. ಈ ಉಪಕ್ರಮದಿಂದಾಗಿ ರಾಜ್ಯಕ್ಕೆ 25 ಸಾವಿರ ಕೋಟಿ ರೂ. ಮೊತ್ತದ ಹೂಡಿಕೆ ಖಾತ್ರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಉದ್ಯಮಿಗಳೊಂದಿಗೆ ಮಾತನಾಡಿದ ಅವರು, `ಕರ್ನಾಟಕವು ಅತ್ಯುತ್ತಮವಾದ ಕೈಗಾರಿಕಾ ನೀತಿಯನ್ನು ಹೊಂದಿದ್ದು, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ವಿದ್ಯುನ್ಮಾನ, ಸೆಮಿ ಕಂಡಕ್ಟರ್ ಉತ್ಪಾದನೆ, ಆರೋಗ್ಯ ಸೇವೆಗಳು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ, ಮಾನವ ಸಂಪನ್ಮೂಲ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.
ನೇರ ವಿದೇಶಿ ಹೂಡಿಕೆ ಆಕರ್ಷಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಸಂಶೋಧನೆ, ಆವಿಷ್ಕಾರ ಮತ್ತು ನಾವೀನ್ಯತೆ ಸೂಚ್ಯಂಕದಲ್ಲಿ ಕೂಡ ಗಮನಾರ್ಹ ಜಾಲವನ್ನು ಹೊಂದಿದೆ. ಹೀಗಾಗಿ, ಈಗಾಗಲೇ ರಾಜ್ಯದಲ್ಲಿ ಹೂಡಿಕೆ ಮಾಡಿರುವ ಕಂಪೆನಿಗಳು ಮತ್ತಷ್ಟು ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಬೇಕು ಎಂದು ಕೋರಿದರು.
ರಾಜ್ಯ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಇದ್ದರು.