ವಿವಿಗಳಲ್ಲಿನ ಖಾಲಿ ಹುದ್ದೆ, ಪಿಂಚಣಿ ಬಗ್ಗೆ ಸಂಪುಟ ಉಪ ಸಮಿತಿ ವರದಿ ಬಳಿಕ ಕ್ರಮ : ಸಚಿವ ಎಂ.ಸಿ. ಸುಧಾಕರ್

ಎಂ.ಸಿ.ಸುಧಾಕರ್
ಬೆಂಗಳೂರು : ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿನ ಖಾಲಿ ಹಾಗೂ ಅವೈಜ್ಞಾನಿಕ ಹುದ್ದೆಗಳು, ನಿವೃತ್ತ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿದ್ದು, ಅದರ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಸೋಮವಾರ ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು, ತೆರವು ಹಾಗೂ ಮಂಜೂರಾಗಿರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪರಿಶೀಲಿಸಿ ಸಮಗ್ರ ವರದಿ ನೀಡುವಂತೆ ಸಚಿವ ಸಂಪುಟದ ಉಪಸಮಿತಿಗೆ ಸೂಚಿಸಲಾಗಿದೆ ಎಂದರು.
ಕರ್ನಾಟಕ ವಿ.ವಿ., ಬೆಂಗಳೂರು, ಮೈಸೂರು ಸೇರಿ ಎಲ್ಲಾ ವಿ.ವಿ.ಗಳಲ್ಲಿ ಸರಾಸರಿ 2,800 ಹುದ್ದೆಗಳು ಖಾಲಿ ಉಳಿದಿವೆ. ಹಿಂದಿನ ಸರಕಾರ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡದಿದ್ದರಿಂದ ಸಮಸ್ಯೆ ತಲೆದೋರಿದೆ. ಕೆಲ ವಿ.ವಿ.ಗಳಲ್ಲಿ ಅವೈಜ್ಞಾನಿಕ ಹುದ್ದೆಗಳು ಸೃಷ್ಟಿಯಾದರೆ, ಇನ್ನೂ ಕೆಲವು ವಿ.ವಿ.ಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಹುದ್ದೆಗಳು ಖಾಲಿಯಿವೆ ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದರು.
ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವ ದೃಷ್ಟಿಯಿಂದ ಉಪಸಂಪುಟ ಸಮಿತಿಗೆ ಸಮಗ್ರವಾಗಿ ಪರಿಶೀಲನೆ ಮಾಡುವ ಜವಾಬ್ದಾರಿ ನೀಡಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಅಲ್ಲದೆ, ವಿ.ವಿ.ಗಳ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಹಾಗೂ ದುಂದು ವೆಚ್ಚ ಕಡಿಮೆಗೊಳಿಸಲು ವಿ.ವಿ.ಗಳ ತಿದ್ದುಪಡಿ ಅಧಿನಿಯಮ ತಿದ್ದುಪಡಿ ಮಾಡಲು ಚಿಂತಿಸಲಾಗಿದೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ರಾಯಚೂರು ವಿ.ವಿ.ಯಲ್ಲಿ ಖಾಲಿಯಿದ್ದ 25 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಿದೆ. ಜನಪದ ವಿ.ವಿ.ಯಲ್ಲಿ ತೆರವಾಗಿರುವ ಹುದ್ದೆಗಳನ್ನು ತುಂಬಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ವಿ.ವಿ.ಗಳಲ್ಲಿದ್ದ ಮೂಲಧನ ಖಾಲಿಯಾಗಿದ್ದು, ಸರಕಾರ ಅನುದಾನ ಬಿಡುಗಡೆ ಮಾಡಿಲ್ಲವೆಂಬ ಸದಸ್ಯ ಎಸ್.ವಿ.ಸಂಕನೂರು ಅವರ ಉಪಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಮುಕ್ತ ವಿ.ವಿ. ರಚನೆ ಪರಿಣಾಮ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಕಷ್ಟವಾಗಿದೆ. ವಿವಿಗಳ ವಿಭಜನೆ ಸಂದರ್ಭದಲ್ಲಿ ನೌಕರರ ಪಿಂಚಣಿ ಹಣ ಸೇರಿದಂತೆ ಅಗತ್ಯ ಸಂಪನ್ಮೂಲಗಳ ಬಗ್ಗೆ ನಿರ್ಧರಿಸಬೇಕಿತ್ತು. ಇದನ್ನು ಮಾಡದ ಕಾರಣ ವಿ.ವಿ.ಗಳ ನಿವೃತ್ತ ನೌಕರರಿಗೆ ನೀಡಲಾಗುವ ಪಿಂಚಣಿ ಹಣ 140 ಕೋಟಿ ರೂ. ಬಾಕಿ ಉಳಿದಿತ್ತು. ಹಿಂದಿನ ವರ್ಷ 91 ಕೋಟಿ ರೂ. ನೀಡಿದರೆ ಈ ವರ್ಷ ಹಂತ-ಹಂತವಾಗಿ 70 ಕೋಟಿ ರೂ. ನೀಡಲಾಗಿದೆ ಎಂದು ಡಾ.ಎಂ.ಸಿ.ಸುಧಾಕರ್ ಮಾಹಿತಿ ನೀಡಿದರು.
2,800 ಹುದ್ದೆಗಳು ಖಾಲಿ: ರಾಜ್ಯದ ಎಲ್ಲಾ ವಿ.ವಿ.ಗಳಲ್ಲಿ ಸರಾಸರಿ ಪ್ರಮಾಣ 2,800 ಹುದ್ದೆಗಳು ಖಾಲಿಯಿವೆ. ವೈಜ್ಞಾನಿಕ ಹಾಗೂ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಲು ನಿರ್ದಿಷ್ಟ ಮಾನದಂಡ ರೂಪಿಸಲಾಗುತ್ತಿದೆ. ಹಂತ-ಹಂತವಾಗಿ ತೆರವಾಗಿರುವ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದು ಡಾ.ಎಂ.ಸಿ.ಸುಧಾಕರ್ ವಿವರಿಸಿದರು.