ಸಚಿವ ನಾಗೇಂದ್ರ ಬಳ್ಳಾರಿ ಪ್ರವೇಶಕ್ಕೆ ಅವಕಾಶ ನೀಡಬಾರದು: ಜನಾರ್ದನ ರೆಡ್ಡಿ
ಬೆಳಗಾವಿ: ಅಕ್ರಮ ಗಣಿಗಾರಿಕೆಯ 20ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಬಳ್ಳಾರಿ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸದಸ್ಯ ಜಿ.ಜನಾರ್ದನ ರೆಡ್ಡಿ ಆಗ್ರಹಿಸಿದರು.
ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕೆಲವು ಅಧಿಕಾರಿಗಳು ಬಳ್ಳಾರಿ ಜಿಲ್ಲೆಯಲ್ಲಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ತುಕಾರಾಂ ಹೇಳಿದ್ದಾರೆ. ಅಂತಹ ಅಧಿಕಾರಿಗಳನ್ನು ಬಳ್ಳಾರಿಯಿಂದ ಹೊರಗೆ ಕಳುಹಿಸಬೇಕು. ಅದೇ ರೀತಿ ಸಚಿವ ನಾಗೇಂದ್ರ ಬಳ್ಳಾರಿ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂದು ನಾನು ಬಳ್ಳಾರಿ ಜಿಲ್ಲೆಗೆ ಹೋಗುತ್ತಿಲ್ಲ. ತುಕಾರಾಂ ಕೆಲಸ ಮಾಡುತ್ತಿದ್ದ ವಿ.ಎಸ್.ಲಾಡ್ ಸಂಸ್ಥೆಯು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದೆ ಎಂದು ನ್ಯಾಯಾಲಯ ಅದರ ಪರವಾನಗಿ ರದ್ದು ಮಾಡಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ರಂಗನಾಥ್, ಸಂಸ್ಥೆ ತಪ್ಪು ಮಾಡಿದ್ದರೆ, ಅದರಲ್ಲಿ ಕೆಲಸ ಮಾಡುವವರನ್ನು ತಪ್ಪಿತಸ್ಥರು ಎಂದು ಹೇಗೆ ಕರೆಯಲು ಸಾಧ್ಯ ಎಂದರು. ಆಗ ಎದ್ದು ನಿಂತ ಜನಾರ್ದನ ರೆಡ್ಡಿ, ಸಚಿವರ ವಿರುದ್ಧ 20ಕ್ಕು ಹೆಚ್ಚು ಪ್ರಕರಣಗಳು ಇವೆ. ಅವರನ್ನು ಬಳ್ಳಾರಿ ಪ್ರವೇಶಕ್ಕೆ ಹೇಗೆ ಅವಕಾಶ ನೀಡುತ್ತೀರಾ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ನೀವು ನಿಮ್ಮ ಅಭಿಪ್ರಾಯಗಳನ್ನು ಹೇಳಿದ್ದೀರಾ. ಯಾರನ್ನೂ ಎಲ್ಲಿ ಕಳುಹಿಸಬೇಕು, ಕರೆಸಿಕೊಳ್ಳಬೇಕು ಎಂಬುದರ ಬಗ್ಗೆ ಸರಕಾರ ತೀರ್ಮಾನ ಮಾಡುತ್ತದೆ ಎಂದು ಹೇಳುವ ಮೂಲಕ ಚರ್ಚೆಗೆ ಅಂತ್ಯ ಹಾಡಿದರು.