ಆಸ್ತಿಗಳ ನಗದೀಕರಣದ ಪ್ರಸ್ತಾವ ಸರಕಾರದ ಮುಂದೆ ಇಲ್ಲ : ಸಚಿವ ಭೋಸರಾಜು
ಬೆಂಗಳೂರು : ಆಸ್ತಿ ನಗದೀಕರಣ ಕುರಿತಾಗಿ ಆರ್ಥಿಕ ಇಲಾಖೆ ಕೇವಲ ಮಾಹಿತಿ ಸಂಗ್ರಹಕ್ಕೆ ಮಾತ್ರ ಮುಂದಾಗಿತ್ತು. ಹೀಗಾಗಿಯೇ ಗೊಂದಲ ಉಂಟಾಗಿದೆ. ಆದರೆ ಆಸ್ತಿ ನಗದೀಕರಣ ಮಾಡುವ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಸಚಿವ ಎನ್. ಎಸ್.ಭೋಸರಾಜು ಸ್ಪಷ್ಟಪಡಿಸಿದ್ದಾರೆ.
ಗುರುವಾರ ಪರಿಷತ್‍ನಲ್ಲಿ ಜೆಡಿಎಸ್‍ನ ಸದಸ್ಯ ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆಸ್ತಿಗಳ ನಗದೀಕರಣ ಕೇವಲ ಇಲಾಖೆಗಳ ಆಂತರಿಕ ವಿಷಯ. ಅವರ ಮಟ್ಟದಲ್ಲಿ ಚರ್ಚೆಯಾಗಿದೆಯೇ ಹೊರತು ಸರಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಒಂದು ವೇಳೆ ಆಸ್ತಿಗಳ ನಗದೀಕರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಬೇಕು. ಮುಖ್ಯಮಂತ್ರಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಇವೆಲ್ಲವೂ ಚರ್ಚೆಯಾದ ನಂತರವೇ ತೀರ್ಮಾನವಾಗುತ್ತದೆ ಎಂದು ಹೇಳಿದರು.
ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‍ನ ತಿಪ್ಪೇಸ್ವಾಮಿ, ಗ್ಯಾರಂಟಿಗಳ ಹಿನ್ನೆಲೆ ಸರಕಾರದ ಬೊಕ್ಕಸ ಖಾಲಿಯಾಗಿದೆ. ರಾಜ್ಯ ಸರಕಾರ ನಿಗಮ, ಪ್ರಾಧಿಕಾರ, ಮಂಡಳಿಗಳ ಆಸ್ತಿಗಳನ್ನು ನಗದೀಕರಣ ಮಾಡಲು ಹೊರಟಿದೆ ಎಂದು ತಿಳಿಸಿದರು. ಇದೇ ವೇಳೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಇದು ಹಣಕಾಸು ಇಲಾಖೆಯ ಆಂತರಿಕ ವಿಚಾರವಾಗಿದೆ. ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸುವುದು ಸೂಕ್ತವಲ್ಲ ಎಂದು ಸಲಹೆ ಮಾಡಿದರು.