ಪ್ರಧಾನಿ ಮೋದಿ ಸುಳ್ಳು ಕಾರ್ಖಾನೆ ಮಾಲಕ, ಅಮಿತ್ ಶಾ ಪಾಲುದಾರ : ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು: ಮೋದಿ ಮುಖ್ಯಮಂತ್ರಿಯಿಂದ ಪ್ರಧಾನಮಂತ್ರಿಯಾಗಬೇಕೆಂದು ತೀರ್ಮಾನ ಮಾಡಿದ ನಂತರ 15 ವರ್ಷಗಳ ಹಿಂದೆ ವಿಶಿಷ್ಟವಾದ ತಪ್ಪು ಮಾಹಿತಿ, ನಕಲಿ ಮಾಹಿತಿ, ಸುಳ್ಳು ಮಾಹಿತಿ, ಸುಳ್ಳು ಸುದ್ದಿಯ ಕಾರ್ಖಾನೆಯನ್ನು ಆರಂಭಿಸಿದರು. ಇದರಲ್ಲಿ ಅಮಿತ್ ಶಾ ಪಾಲುದಾರರು ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆಗೆ ಕೆಲಸಕ್ಕೆ ಬಾರದ ಅಮಿತ್ ಮಾಳವಿಯಾ ಎಂಬಾತ ಮ್ಯಾನೇಜರ್ ಆಗಿದ್ದಾರೆ. ಕಾರ್ಖಾನೆ ನಡೆಸಲು ಕೆಲವು ಜೀತದಾಳುಗಳನ್ನು ಇಟ್ಟಿದ್ದಾರೆ. ಹಲವು ರಾಜ್ಯಗಳಲ್ಲಿ ವಕ್ತಾರರು, ಶಾಸಕರು, ಸಂಸದರು ಈ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಹಾಗೂ ಹಲವು ಬಾಡಿಗೆ ಭಾಷಣಕಾರರು ದುಡಿಯುತ್ತಿದ್ದಾರೆ ಎಂದು ಹೇಳಿದರು.
ಸುಳ್ಳು ಸುದ್ದಿ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಮೋದಿಯಂತ ದೊಡ್ಡ ಸುಳ್ಳುಗಾರ ಮೊತ್ತೊಬ್ಬರಿಲ್ಲ. ಅವರ ಸುಳ್ಳು ಪ್ರತಿಪಾದನೆಗೆ ಸುಳ್ಳಿನ ಕಾರ್ಖಾನೆ ಆರಂಭಿಸಲಾಗಿದೆ. ಚುನಾವಣೆ ಬಂದಾಗ ಹೊಸಹೊಸ ಪ್ರಯೋಗವಾಗುತ್ತದೆ. ಲವ್ ಜಿಹಾದ್, ನಗರ ನಕ್ಸಲರು ಎಂಬ ಪದ ಬಿಟ್ಟು, ಈಗ ಲ್ಯಾಂಡ್ ಜಿಹಾದ್ ಎನ್ನುತ್ತಿದ್ದಾರೆ. ಲವ್ ಜಿಹಾದ್ನಲ್ಲಿ ಎಷ್ಟು ಪ್ರಕರಣ ದಾಖಲಾಗಿದೆ ಎಂದು ಸಂಸದರು ಪ್ರಶ್ನೆ ಕೇಳಿದಾಗ ಕೇಂದ್ರ ಸರಕಾರ ಕೊಟ್ಟ ಉತ್ತರ ಶೂನ್ಯ ಎಂದು ಹೇಳಿತ್ತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ನೋಟು ರದ್ಧತಿಗೆ ಇಂದು(ನ.8) ವಾರ್ಷಿಕೋತ್ಸವ. ಎಲ್ಲ ಕಪ್ಪು ಹಣ ವಾಪಸ್ ಬರುತ್ತದೆ ಇದೊಂದು ಮೋದಿಯ ಮಾಸ್ಟರ್ ಸ್ಟ್ರೋಕ್, ನೋಟಲ್ಲಿ ಮೈಕ್ರೋ ಚಿಪ್ ಇದೆ, ನ್ಯಾನೋ ಟೆಕ್ನಾಲಜಿ ಇದೆ ಎಂದು ಪ್ರಚಾರ ಮಾಡಿದ್ದರು. ಬಾಡಿಗೆ ಭಾಷಣಕಾರರಿಂದ ಆರಂಭವಾಗಿ, ಬಿಜೆಪಿ ನಾಯಕರು ಪ್ರಚಾರ ಮಾಡಿ ಕಾರ್ಯಕರ್ತರನ್ನು ತಲುಪಿ ಸುದ್ದಿಯಾಯಿತು. ಈಗ ಇದರ ಕಥೆ ಏನಾಯ್ತು? ನೋಟು ರದ್ಧತಿ ಮಾಡಿದಾಗ ಎಟಿಎಂ ಕ್ಯೂನಲ್ಲಿ ಎಷ್ಟು ಜನ ಸತ್ತರು ಎಂದು ಮಾತನಾಡುವುದಿಲ್ಲ. ಎಷ್ಟು ಉದ್ಯಮ ಮುಚ್ಚಿದವು, ಎಷ್ಟು ಆತ್ಮಹತ್ಯೆ ನಡೆಯಿತು ಎಂಬುದರ ಲೆಕ್ಕವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜೆಪಿಸಿಯಿಂದ ನೀತಿ ಸಂಹಿತೆ ಉಲ್ಲಂಘನೆ :
ಜೆಪಿಸಿಯು ಬಿಜೆಪಿಯ ಸಮಿತಿಯಾಗಿದೆ. ಜಂಟಿ ಸಂಸದೀಯ ಸಮಿತಿಯ ಕಾರ್ಯವೈಖರಿಗೆ ಅದರದೇ ಆದ ವ್ಯವಸ್ಥೆ ಇದೆ. ಅವರು ಪ್ರವಾಸಿಗರಾಗಿ ರಾಜ್ಯಕ್ಕೆ ಭೇಟಿ ನೀಡಲಿ. ಈ ವಿಚಾರವಾಗಿ ಮಾಹಿತಿ ಕಲೆಹಾಕುವುದಾದರೆ, ಸಮಿತಿಯ ಇತರೆ ಸದಸ್ಯರು ಯಾಕೆ ಬಂದಿಲ್ಲ? ಸಮಿತಿಗೆ ಸಂಬಂಧವಿಲ್ಲದ ಬಿಜೆಪಿ ನಾಯಕರ ಜತೆ ವಿಚಾರಣೆ ನಡೆಸುತ್ತಿರುವುದೇಕೆ? ಜಿಪಿಸಿ ಮೂಲಕ ಒತ್ತಡ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ದೂರಿದರು.
ಜೆಪಿಸಿಯು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದೆ. ಜಾರ್ಖಂಡ್, ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದಾಗ ಈ ರೀತಿ ಮಾಡುತ್ತಿರುವುದು ರಾಜಕೀಯ ದುರುದ್ದೇಶವಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿಯ ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ, ಕೆಪಿಸಿಸಿ ಸಂವಹನ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಉಪಸ್ಥಿತರಿದ್ದರು.