ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಹೇಳಿದರೆ, ಕೇಳಿಕೊಂಡು ಸುಮ್ಮನಿರಲು ಆಗುವುದಿಲ್ಲ : ಸಚಿವ ರಾಜಣ್ಣ
ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದರೆ ಕೇಳಿಕೊಂಡು ಸುಮ್ಮನೆ ಇರಬೇಕಾ?. ಪಕ್ಷದಿಂದ ನೋಟಿಸ್ ಕೊಡುತ್ತಾರಾ ಕೊಡಲಿ, ಬಳಿಕ ನಾನು ಮಾತನಾಡುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಬಾಯಿಗೆ ಬೀಗ ಎಲ್ಲರೂ ಹಾಕಿಕೊಳ್ಳಬೇಕು. ಎಲ್ಲರೂ ಸುಮ್ಮನೆ ಇದ್ದರೆ ನಾನೂ ಸುಮ್ಮನೆ ಇರುತ್ತೇನೆ. ಡಿ.ಕೆ.ಶಿವಕುಮಾರ್ ಅವರು ಈ ಸಂಬಂಧ ವಿವಾದ ಆಗಬಾರದೆಂದು ಆ ರೀತಿಯಲ್ಲಿ ಹೇಳಿಕೆ ನೀಡಿರುತ್ತಾರೆ ಎಂದು ಇದೇ ವೇಳೆ ಹೇಳಿದರು.
‘ನಾವು ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನವನ್ನು ಕೇಳಲೇಬಾರದಾ?, ಕೇಳಿದರೇ ತಪ್ಪಾಗುತ್ತದೆಯೇ?, ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಹೇಳಿದರೆ ಕೇಳಿಕೊಂಡು ಸುಮ್ಮನೆ ಇರಲು ಆಗುವುದಿಲ್ಲ’ ಎಂದು ರಾಜಣ್ಣ ತಿಳಿಸಿದರು.
‘ಶಾಮನೂರು ಅವರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಅವರ ಸ್ವಾಮೀಜಿ ಹೇಳುತ್ತಿದ್ದಾರೆ. ಸತೀಶ್ ಜಾರಕಿಹೊಳಿರನ್ನು ಮಾಡಿ ಎಂದು ಅವರ ಸ್ವಾಮೀಜಿ ಹೇಳುತ್ತಾರೆ. ಸ್ವಾಮೀಜಿಗಳು ಹೇಳುವುದನ್ನು ಕೇಳುವುದಕ್ಕೆ ಆಗುತ್ತದೆಯೇ?. ಸ್ವಾಮೀಜಿ ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ' ಎಂದು ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.
‘ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಎಂಬುದಲ್ಲ, ಪ್ರಜಾಪ್ರಭುತ್ವ ಪರವಾಗಿ ಇದ್ದೇನೆ. ಬಡವರ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವರ ಜೊತೆಯಲ್ಲಿ ನಾವಿದ್ದೇವೆ. ಸ್ವಾಮೀಜಿಗಳದ್ದು ಅವರ ಜಾಗ ಅವರದ್ದು' ಎಂದು ರಾಜಣ್ಣ, ತಿರುಗೇಟು ನೀಡಿದರು.
ಸೋಲಿಸಿದ್ದು ಇವರೇ: ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ಇವರೆಲ್ಲ ಸ್ವಾಮೀಜಿಗಳು ಒಂದಾಗಿ ಸೋಲಿಸಿದರು. ದೇವೇಗೌಡರು ಹುಟ್ಟುಹಾಕಿದ ಸ್ವಾಮೀಜಿಗಳು ಇವರು. ಯಾರನ್ನು ಸಿಎಂ ಮಾಡಬೇಕೆಂದು ಶಾಸಕರು, ಹೈಕಮಾಂಡ್ ನಿರ್ಧರಿಸುತ್ತದೆ. ಸ್ವಾಮೀಜಿಗಳು ಹೇಳಿದಂತೆ ಮಾಡಲು ಆಗುವುದಿಲ್ಲ' ಎಂದು ಹೇಳಿದರು.