ಸಾರಿಗೆ ಸಿಬ್ಬಂದಿಗಳ ಬೇಡಿಕೆಗಳ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚೆ : ಸಚಿವ ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ
ಬೆಂಗಳೂರು : ಸಾರಿಗೆ ನಿಗಮಗಳ ಸಿಬ್ಬಂದಿಗಳ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬುಧವಾರ ಪುರಭವನದ ಪುಟ್ಟಣ್ಣ ಚೆಟ್ಟಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಾರಿಗೆ ನೌಕರ ಅಭಿನಂದನಾ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ, ವೇತನ ಪರಿಷ್ಕರಣೆಗೆ ಆಯೋಗ ರಚನೆ, ಉಚಿತ ಆರೋಗ್ಯ ಸೇವೆ ಸೇರಿದಂತೆ ತಮ್ಮ ಬೇಡಿಕೆಗಳನ್ನು ಚರ್ಚಿಸಲಾಗುವುದು ಎಂದರು.
ಕರ್ತವ್ಯದ ವೇಳೆ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟಲ್ಲಿ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ಅನುಕಂಪದ ಉದ್ಯೋಗಕ್ಕೂ ಒತ್ತು ನೀಡುತ್ತಿದೆ. ಸಾರಿಗೆ ನೌಕರ ಹಾಗೂ ಸಿಬ್ಬಂದಿ ಕ್ಷೇಮಾಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ನೌಕರ, ಸಿಬ್ಬಂದಿಗೆ ಗೌರವಿಸಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ, ಸಾರಿಗೆ ನಿಗಮಗಳ ಅಧ್ಯಕ್ಷರಾದ ಫಿರಸಾಬ ಕೌತಾಳ ಸೇರಿದಂತೆ ಇತರರಿದ್ದರು.