ಮೆಟ್ರೋ ದರ ಹೆಚ್ಚಳಕ್ಕೂ ರಾಜ್ಯ ಸರಕಾರಕ್ಕೂ ಸಂಬಂಧವಿಲ್ಲ: ಸಚಿವ ರಾಮಲಿಂಗಾರೆಡ್ಡಿ

ರಾಮಲಿಂಗಾರೆಡ್ಡಿ
ಬೆಂಗಳೂರು : ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳಕ್ಕೂ ರಾಜ್ಯ ಸರಕಾರಕ್ಕೂ ಸಂಬಂಧವಿಲ್ಲ. ಬಿಜೆಪಿ ನಾಯಕರು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರವೇ ಸಮಿತಿಯನ್ನು ರಚನೆ ಮಾಡಲಿದ್ದು, ಆ ಸಮಿತಿ ಶಿಫಾರಸ್ಸಿನ ಮೇಲೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗಳು ದರ ಏರಿಕೆಗೆ ನಿರ್ಧಾರ ಮಾಡಿದ್ದಾರೆ ಎಂದರು.
ದರ ಏರಿಕೆ ಸಮಿತಿ ಮಾಡುವ ಶಿಫಾರಸ್ಸನ್ನು ಮೆಟ್ರೋ ಮಂಡಳಿ ಸಭೆಯಲ್ಲಿ ಮಂಡಿಸಿ ಅನುಮತಿ ಪಡೆದ ನಂತರ ಜಾರಿಗೆ ತರಲಾಗುತ್ತದೆ. ಮೆಟ್ರೋ ರೈಲು ಪ್ರಯಾಣದರ ಏರಿಕೆ ಮಾಡುವಂತೆ ರಾಜ್ಯ ಸರಕಾರಕ್ಕೆ ಯಾವುದೇ ಶಿಫಾರಸ್ಸು ಸಲ್ಲಿಸುವುದಿಲ್ಲ. ಇದು ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರಕಾರದ ಪಾತ್ರವಿಲ್ಲ. ಮೆಟ್ರೊ ಕಾಯ್ದೆ ಅನುಸಾರ ಸಮಿತಿ ರಚನೆಯಾಗಲಿದೆ. ಆ ಸಮಿತಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು, ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ರಾಜ್ಯ ಸರಕಾರದ ಒಬ್ಬರು ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿ ಪ್ರಯಾಣದರ ಏರಿಕೆ ಬಗ್ಗೆ ಕೇಂದ್ರ ಸರಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗೆ ವರದಿ ಸಲ್ಲುತ್ತದೆಯೇ ಹೊರತು ರಾಜ್ಯ ಸರಕಾರಕ್ಕೆ ಅಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಮೆಟ್ರೋ ರೈಲು ಪ್ರಯಾಣ ದರ ಇಳಿಕೆಗೆ ಬಿಜೆಪಿಯವರು ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡಬೇಕು. ಪ್ರಧಾನಿ ನರೇಂದ್ರಮೋದಿಯವರನ್ನು ಕೇಳಲು ಬಿಜೆಪಿಯವರಿಗೆ ಧಮ್ ಇಲ್ಲ. ನಷ್ಟ ಆದರೂ ನಾವು ರಸ್ತೆ ಸಾರಿಗೆ ನಿಗಮಗಳಿಗೆ ಸಬ್ಸಿಡಿ ಕೊಡುತ್ತಿದ್ದೇವೆ. ಅದೇ ರೀತಿ ನಮ್ಮ ಮೆಟ್ರೋಗೂ ಕೇಂದ್ರ ಸರಕಾರ ಸಬ್ಸಿಡಿ ಕೊಡಲಿ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕೇಂದ್ರದ ಸಚಿವರಿಂದ ತಪ್ಪು ಮಾಹಿತಿ: ಕೇಂದ್ರ ಸಚಿವರಾದ ಅಶ್ವಿನಿ ಶ್ರೀವೈಷ್ಣವ್, ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರು ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾವೇ ಮೆಟ್ರೋ ತಂದಿದ್ದು ಎಂದು ಪೋಸ್ ಕೊಡುತ್ತಾರೆ. ಇಂಥ ಆರೋಪಗಳ ಬಂದಾಗ ರಾಜ್ಯ ಸರಕಾರದ ಮೇಲೆ ಹಾಕುತ್ತಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.