ರೈತರ ಹಿತದೃಷ್ಟಿಯಿಂದ ಲಾರಿ ಮುಷ್ಕರ ಒಳಿತಲ್ಲ: ಸಚಿವ ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ
ಬೆಂಗಳೂರು : ಸಾರ್ವಜನಿಕರ, ರೈತರ ಹಿತದೃಷ್ಟಿಯಿಂದ ಯಾವುದೇ ರೀತಿಯ ಮುಷ್ಕರ ಒಳಿತಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಲಾರಿ ಮಾಲಕರ ಮುಷ್ಕರಕ್ಕೆ ಸಂಬಂಧಿಸಿದಂತೆ ಸೋಮವಾರ ಸಂಘದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ಹಿಂದಿನ 10 ವರ್ಷದಲ್ಲಿ ದುಬಾರಿ ಮಾಡಿದೆ. ಆಗ ಯಾವುದೇ ರೀತಿಯ ಲಾರಿ ಮುಷ್ಕರ ನಡೆಸಲಿಲ್ಲ. ಈಗ ರಾಜ್ಯ ಸರಕಾರ ಮಾಡಿದ ತಕ್ಷಣ ಮುಷ್ಕರಕ್ಕೆ ಕರೆ ನೀಡಿದ್ದಾರೆ ಎಂದಿದ್ದಾರೆ.
2015ರಲ್ಲಿ 49.54 ರೂ. ಇದ್ದ ಡೀಸೆಲ್ ಬೆಲೆಯು ಈಗ 91.05 ರೂ.ಗೆ ಹೆಚ್ಚಳವಾಗಿದೆ. ಕೇಂದ್ರ ಸರಕಾರದ ವಿತ್ತ ನೀತಿಯಿಂದ ರಾಜ್ಯ ಸರಕಾರಗಳು ಕೆಲವೊಂದು ತೆರಿಗೆಗಳನ್ನು ವಿಧಿಸುವ ಅನಿವಾರ್ಯಕ್ಕೆ ಒಳಗಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯು ವಿನಾಶದೆಡೆಗೆ ಸಾಗುತ್ತಿದೆ. ಇದ್ಯಾವುದಕ್ಕೂ ಚಕಾರವೆತ್ತದೆ ಮುಷ್ಕರ ಮಾಡಿದರೆ ಹೇಗೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಸರಕಾರ ಮಾತುಕತೆಗೆ ಕರೆದರೆ ಸಿದ್ಧ: ನಾವು ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೆವು. ಸರಕಾರ ಕರೆದರೆ ಮಾತುಕತೆಗೆ ನಾವು ಸಿದ್ಧವಾಗಿದ್ದೇವೆ. ಕೂಡಲೇ ಲಾರಿ ಮಾಲಕರ ಸಮಸ್ಯೆಗಳನ್ನು ಸರಕಾರ ಪರಿಹರಿಸಬೇಕು. ಡೀಸೆಲ್ ದರ ಬಗ್ಗೆ ಮರು ಪರಿಶೀಲನೆ ಮಾಡಬೇಕು. ಲಾರಿ ಮಾಲಕರು, ಟ್ರ್ಯಾಕ್ಟರ್ ಮಾಲಕರು, ರೈತರು ಪರದಾಡುತ್ತಿದ್ದಾರೆ. ಗಡಿ ಚೆಕ್ ಪೋಸ್ಟ್ಗಳಲ್ಲಿ ಆರ್ಟಿಓ ಅಧಿಕಾರಿಗಳ ಸುಲಿಗೆ ನಿಲ್ಲಬೇಕು. ಬೆಂಗಳೂರು ನಗರಕ್ಕೆ ಬರುವ ಲಾರಿಗಳಿಗೆ ನಿರ್ಬಂಧ ಸಡಿಲಿಸಬೇಕು. ದಿನಬಳಕೆ ವಸ್ತುಗಳ ಲಾರಿಗಳಿಗೆ ಇರುವ ನಿರ್ಬಂಧ ಸಡಿಲಿಸಬೇಕು ಎಂದು ರಾಜ್ಯ ಲಾರಿ ಮಾಲಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ತಿಳಿಸಿದ್ದಾರೆ.