ಸಚಿವ ಸಂಪುಟ ಸಭೆಗೆ ಗೈರಾಗಿದ್ದಕ್ಕೆ ಕಾರಣ ತಿಳಿಸಿದ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
ಬೆಂಗಳೂರು: ಇಲಾಖೆ ಕಾರ್ಯನಿಮಿತ್ತ ಹೊಸದಿಲ್ಲಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹತ್ತು ವರ್ಷದಿಂದ ಹಲವು ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಹಣ ಬಿಡುಗಡೆ ಬಾಕಿ ಇದೆ. ಕೇಂದ್ರ, ರಾಜ್ಯ ಹೆದ್ದಾರಿ ಸಂಬಂಧದ ಪ್ರಸ್ತಾವಗಳು ಬೇರೆ ಬೇರೆ ರೀತಿ ಇದೆ. ಒನ್ ಟು ಒನ್ ಸಭೆ ಸಕ್ಸಸ್ ಆಗಿಲ್ಲ. ತಿಂಗಳಲ್ಲಿ ಎರಡು ಬಾರಿ ಸಭೆ ಮಾಡಿದ್ದೇವೆ’ ಎಂದು ಹೇಳಿದರು.
ರಾಜ್ಯದ 20 ಪ್ರಸ್ತಾವಗಳು ಬಾಕಿ ಉಳಿದಿವೆ. ಶಿವಮೊಗ್ಗ, ಗದಗ, ರಾಯಚೂರು ರಿಂಗ್ ರೋಡ್ಗಳಿಗೆ ಪ್ರಸ್ತಾವ ಬೇರೆ ಇದೆ. ಬೇರೆ ಮಾದರಿಯಲ್ಲಿ ಪ್ರಸ್ತಾವ ಸಲ್ಲಿಸಲು ಕೋರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀರ್ಮಾನ ಮಾಡಬೇಕು ಎಂದ ಅವರು, ಬೆಂಗಳೂರಿನಲ್ಲಿ ಟನಲ್ ನಿರ್ಮಾಣಕ್ಕೆ ಚಿಂತನೆ ಇದೆ. ರಾಷ್ಟ್ರೀಯ ಹೆದ್ದಾರಿಯಿಂದಲೇ ಮಾಡುವ ಚಿಂತನೆ ಇದೆ. ನಮ್ಮಿಂದ ಎನ್ಒಸಿ ಆಗಬೇಕು. ಪೀಣ್ಯ, ವೈಟ್ಫೀಲ್ಡ್, ಕೆ.ಆರ್.ಪುರದಿಂದ ಮೇಕ್ರಿ ಸರ್ಕಲ್ವರೆಗೆ ಟನಲ್ ಆಗಬೇಕಿದೆ’ ಎಂದರು.
‘ಶೇ.6ರಷ್ಟು ಮಾತ್ರ ವರ್ಗಾವಣೆ ಮಾಡಬಹುದು. ಶಾಸಕರ ಕೆಲ ಸಮಸ್ಯೆಗಳು ಇವೆ. ಅವುಗಳನ್ನು ಮುಖ್ಯಮಂತ್ರಿಯೆ ಪರಿಹರಿಸಬೇಕು. ಹೀಗಾಗಿಯೇ ಅವರು ಜಿಲ್ಲಾವಾರು ಸಭೆ ಮಾಡುತ್ತೇನೆಂದು ತಿಳಿಸಿದ್ದಾರೆ. ಶಾಸಕರು ಶಿಫಾರಸ್ಸು ಕೊಟ್ಟ ಕೂಡಲೇ ನೌಕರರನ್ನ ಏಕಾಏಕಿ ತೆಗೆದು ಹಾಕಲು ಆಗುವುದಿಲ್ಲ. ಸಚಿವರು, ಶಾಸಕರ ಕೈಗೆ ಸಿಗುವುದಿಲ್ಲ ಎಂಬುದು ತಪ್ಪು. ನಾವಂತೂ ಎಲ್ಲರಿಗೂ ಸಿಗುತ್ತಿದ್ದೇವೆ' ಎಂದರು.