ಲೋಕಸಭೆ ಚುನಾವಣೆಗೆ ಪುತ್ರಿಯನ್ನು ಕಣಕ್ಕಿಳಿಸುವ ಸುಳಿವು ನೀಡಿದ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ, ಜು. 15: ‘ಲೋಕಸಭೆ ಚುನಾವಣೆಗೆ ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ಕೊಡುತ್ತೇವೆ. ಅಗತ್ಯವಿದ್ದರೆ ಪುತ್ರಿಯೂ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ಪಕ್ಷ ಸೂಚಿಸಿದರೆ ನಾನೆ ಸ್ಪರ್ಧಿಸುತ್ತೇನೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಶನಿವಾರ ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಜಿಲ್ಲೆಯ ಶಾಸಕರು, ಬ್ಲಾಕ್ ಅಧ್ಯಕ್ಷರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ ಮತ್ತು ಸಮೀಕ್ಷೆ ವರದಿ ಆಧರಿಸಿ ಮುಂದಿನ ಎರಡು ತಿಂಗಳೊಳಗಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.
‘ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆದರೆ ಇನ್ನೂ ಆಕಾಂಕ್ಷಿಗಳು ಯಾರೂ ತಮ್ಮ ಹೆಸರು ಕೊಟ್ಟಿಲ್ಲ. ಹಾಗಾಗಿ ಚುನಾವಣೆ ಘೋಷಣೆಯಾಗುವ ಮುನ್ನವೇ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‍ಗೆ ರವಾನಿಸುತ್ತೇವೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
4 ಸಾವಿರ ಹೊಸ ಬಸ್ ಖರೀದಿ: ‘ಜಿಲ್ಲೆಯಲ್ಲಿ ಸಾರಿಗೆ ಬಸ್‍ಗಳ ಕೊರತೆಯಿದೆ. ಅದರಲ್ಲೂ ಖಾನಾಪುರ ತಾಲೂಕಿನಲ್ಲಿ ಸಮಸ್ಯೆ ಹೆಚ್ಚಿದೆ. ಇದಕ್ಕೆ ತಾತ್ಕಾಲಿಕವಾಗಿ ಅಗತ್ಯವಿರುವ ವ್ಯವಸ್ಥೆ ಮಾಡುತ್ತೇವೆ. ಕೆಲವೆಡೆ ಬಸ್‍ಗಳನ್ನು ಬಿಡಿಸುತ್ತೇವೆ. ಬಜೆಟ್‍ನಲ್ಲಿ 4 ಸಾವಿರ ಹೊಸ ಬಸ್‍ಗಳನ್ನು ಖರೀದಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಆ ಬಸ್‍ಗಳು ಬಂದರೆ ಬಸ್ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ಸ್ಪಷ್ಟಪಡಿಸಿದರು.