ಪ್ರತಿ ಜಿಲ್ಲೆಯಲ್ಲೂ ಮಹಿಳಾ ಕಾಲೇಜು ಸ್ಥಾಪನೆ : ಸಚಿವ ಝಮೀರ್ ಅಹ್ಮದ್
ಬೆಂಗಳೂರು: ಅಲ್ಪಸಂಖ್ಯಾತರ ಸಮುದಾಯದ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡಲು ವಕ್ಫ್ ಬೋರ್ಡ್ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಪದವಿ ಪೂರ್ವ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.
ಶನಿವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಬೋರ್ಡ್ ವತಿಯಿಂದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 100 ಮದ್ರಸಾಗಳಲ್ಲಿ ಔಪಚಾರಿಕ ಶಿಕ್ಷಣಕ್ಕೆ ಚಾಲನೆ, 26 ಜಿಲ್ಲೆಗಳಿಗೆ ಆಂಬ್ಯುಲೆನ್ಸ್, ಫ್ರೀಝರ್ ಹಾಗೂ 15 ಮಹಿಳಾ ಕಾಲೇಜುಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇದೀಗ 15 ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಒಂದು ಕಾಲೇಜು ಸ್ಥಾಪನೆ ಮಾಡಲು ತೀರ್ಮಾನ ಮಾಡಲಾಗಿದೆ. ಹಿಜಾಬ್ ವಿವಾದದ ನಂತರ ಸಮುದಾಯದ ಹೆಣ್ಣು ಮಕ್ಕಳು ಆತಂಕಗೊಂಡು ಉನ್ನತ ಶಿಕ್ಷಣದಿಂದ ದೂರ ಸರಿಯುವ ವಾತಾವರಣ ನಿರ್ಮಾಣವಾಗಿತ್ತು. ಆ ಹಿನ್ನೆಲೆಯಲ್ಲಿ ಮಹಿಳಾ ಕಾಲೇಜು ಸ್ಥಾಪಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.
ಈ ಮಹಿಳಾ ಕಾಲೇಜುಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುವುದು. ನಾನು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಮ್ಮ ಇಲಾಖೆಯ ಬಜೆಟ್ ನ ಶೇ.65 ರಿಂದ 70ರಷ್ಟು ಮೊತ್ತ ಇದಕ್ಕೆ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ತನ್ನ ಬಜೆಟ್ ನಲ್ಲಿ ಇಡೀ ದೇಶದ ಅಲ್ಪಸಂಖ್ಯಾತರ ಸಮುದಾಯಕ್ಕೆ 3 ಸಾವಿರ ಕೋಟಿ ರೂ.ಇಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 3200 ಕೋಟಿ ರೂ.ಇಟ್ಟಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಸಮುದಾಯಕ್ಕೆ ಸೇವೆ ಮಾಡುವ ಬದ್ಧತೆ ಇದ್ದರೆ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಝಮೀರ್ ಅಹ್ಮದ್ ಖಾನ್ ಉದಾಹರಣೆ. ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ವಸತಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಅವರು ಇಲಾಖೆಯಲ್ಲಿ ಅತಿ ದೊಡ್ಡ ಬದಲಾವಣೆ ಬಂದಿದೆ ಎಂದು ಹೇಳಿದರು.
ಸಮುದಾಯದ ಭಿವೃದ್ಧಿ ಬಗ್ಗೆ ಚಿಂತನೆ ಮಾಡಿ ಎಲ್ಲರ ಜತೆ ಗೂಡಿ ಕೆಲಸ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಅಷ್ಟೇ ಅಲ್ಲದೆ ನಾಡಿನ ಬಡ ಕುಟುಂಬಗಳಿಗೆ ಅವರ ಶ್ರಮ ದಿಂದ ಉಪಕಾರ ಆಗುತ್ತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಝಮೀರ್ ಅಹ್ಮದ್ ಖಾನ್ ನಿರಂತರ ಶ್ರಮ ಹಾಕಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ 26 ಆಂಬ್ಯುಲೆನ್ಸ್ ಹಾಗೂ ಪ್ರತಿ ತಾಲೂಕಿಗೆ ಒಂದರಂತೆ ಫ್ರೀಝರ್ ಗಳನ್ನು ನೀಡಲಾಯಿತು. ವಕ್ಫ್ ಬೋರ್ಡ್ ವತಿಯಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆ ಮಾಡುವ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಬಲ್ಕೀಸ್ ಬಾನು ನೇತೃತ್ವದಲ್ಲಿ ಝಮೀರ್ ಅಹ್ಮದ್ ಖಾನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೌಲಾನಾ ಮಕ್ಸೂದ್ ಇಮ್ರಾನ್, ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಸಲೀಮ್ ಅಹ್ಮದ್, ರಾಜ್ಯಸಭೆ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ವಿಧಾನಪರಿಷತ್ ಪರಿಷತ್ ಸದಸ್ಯೆ ಬಲ್ಕೀಸ್ ಬಾನು, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಸದಸ್ಯರಾದ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ, ಆರ್.ಅಬ್ದುಲ್ ರಿಯಾಝ್ ಖಾನ್, ಜಿ.ಯಾಕೂಬ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.