ಸ್ಪೀಕರ್ ಪೀಠದ ಕುರಿತು ಸಚಿವ ಝಮೀರ್ ಹೇಳಿಕೆ ವಿಧಾನಸಭೆಯಲ್ಲಿ ಪ್ರಸ್ತಾಪ; ಬಿಜೆಪಿ-ಜೆಡಿಎಸ್ ಧರಣಿ
ಬೆಳಗಾವಿ: ಸ್ಪೀಕರ್ ಸ್ಥಾನದ ಕುರಿತು ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರು ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ ಬಿಜೆಪಿ ಹಾಗೂ ಜೆಡಿಎಸ್ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ, ಏರಿದ ಧ್ವನಿಯಲ್ಲಿ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.
ಸೋಮವಾರ ನಟಿ ಲೀಲಾವತಿ ಅವರಿಗೆ ಸಂತಾಪ ಸೂಚನೆ ಬಳಿಕ ಸ್ಪೀಕರ್ ಖಾದರ್ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡು, ಪ್ರಶ್ನೆ ಕೇಳಲು ಬಿಜೆಪಿ ಸದಸ್ಯ ಕೃಷ್ಣ ನಾಯ್ಕ್ ಹೆಸರು ಕರೆದರು. ಆಗ ಉತ್ತರಿಸಲು ಎದ್ದುನಿಂತ ವಸತಿ ಸಚಿವ ಝಮೀರ್ ಅಹ್ಮದ್ ಖಾನ್‍ಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ‘ಸ್ಪೀಕರ್ ಪೀಠದ ಬಗ್ಗೆ ಅಗೌರವ ತೋರಿಸಿರುವ ಝಮೀರ್ ಅವರಿಂದ ಉತ್ತರ ಪಡೆಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ‘ಮುಸ್ಲಿಮ್ ಸ್ಪೀಕರ್ ಮುಂದೆ ಬಿಜೆಪಿ ಶಾಸಕರು ಸಲಾಂ ಸಾಬ್ ಎಂದು ಕೈಮುಗಿದು ನಿಲ್ಲುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ’ ಎಂದು ಸಚಿವ ಝಮೀರ್, ರಾಜ್ಯದ ಜನರ ಭಾವನೆ ಕೆದಕಿದ್ದು, ನಾವೇನು ಗುಲಾಮರೇ...ಝಮೀರ್ ಅವರಿಗೆ ಮಾತನಾಡಲು ಅವರಿಗೆ ಅವಕಾಶ ನೀಡುವುದಿಲ್ಲ. ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕು. ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಯಾವುದೇ ನೋಟಿಸ್ ನೀಡದೆ ಏಕಾಏಕಿ ಮಾತನಾಡಿದರೆ ಹೇಗೆ? ನೋಟಿಸ್ ನೀಡಿ ಮಾತನಾಡಲಿ, ಪ್ರಶ್ನೋತ್ತರ ಅವಧಿಯಲ್ಲಿ ಈ ರೀತಿ ಗದ್ದಲ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಇದರಿಂದ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ಸೃಷ್ಟಿಸಿತು. ಈ ಗದ್ದಲ ಹಿನ್ನೆಲೆಯಲ್ಲಿ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದ ಸ್ಪೀಕರ್ ಕೊಠಡಿಯಲ್ಲಿ ಸಂಧಾನ ಸಭೆ ಕರೆದರು.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕಾನೂನು ಸಚಿವ ಎಚ್.ಕೆ ಪಾಟೀಲ್, ಸಚಿವ ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವರಾದ ಡಾ.ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ ಮತ್ತಿತರರು ಭಾಗವಹಿಸಿದ್ದರು. ಆದರೆ, ಸಂಧಾನ ಸಭೆ ವಿಫಲವಾಯಿತು. ಮತ್ತೆ ಸದನ ಸೇರಿದಾಗ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ಮುಂದುವರಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಚಿವ ಕೃಷ್ಣಬೈರೇಗೌಡ, ‘ಝಮೀರ್ ಅಹ್ಮದ್ ಸ್ಪೀಕರ್ ಪೀಠದ ಬಗ್ಗೆ ಯಾವುದೇ ಅಗೌರವದ ಹೇಳಿಕೆ ನೀಡಿಲ್ಲ. ಉನ್ನತ ಸ್ಥಾನ ನೀಡಿದ್ದೇವೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಬಿಜೆಪಿ ಕ್ಷುಲ್ಲಕ ರಾಜಕೀಯಕ್ಕಾಗಿ ಸದನದ ಅಮೂಲ್ಯ ಸಮಯ ವ್ಯರ್ಥ ಮಾಡುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ಮರೆತಿದೆ’ ಎಂದು ಟೀಕಿಸಿದರು.
ಸ್ಪೀಕರ್ ಖಾದರ್ ಅವರು ಗದ್ದಲದ ಮಧ್ಯೆ, ‘ಮಹತ್ವದ ಪ್ರಶ್ನೋತ್ತರ, ಉತ್ತರ ಕರ್ನಾಟಕ ಮತ್ತು ಬರ ಚರ್ಚೆಗೆ ಅವಕಾಶ ಮಾಡಿಕೊಡಿ. ಸರಕಾರ ಉತ್ತರ ನೀಡಬೇಕಿದೆ. ಹೀಗಾಗಿ ಕಲಾಪದ ಸಮಯ ವ್ಯರ್ಥ ಮಾಡಬೇಡಿ ರಾಜಕೀಯ ವಿಚಾರ ಬಿಟ್ಟು ತಮ್ಮ ಸ್ಥಾನಗಳಿಗೆ ತೆರಳಿ ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಕೋಮುವಾದಿ ಝಮೀರ್ ಅಹ್ಮದ್ ಖಾನ್‍ಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಈ ಗದ್ದಲದ ಮಧ್ಯೆಯೇ ಪ್ರಶ್ನೋತ್ತರ ಕಲಾಪ, ಐದು ವಿಧೇಯಕಗಳ ಅನುಮೋದನೆ ಹಾಗೂ ಬರ ಪರಿಸ್ಥಿತಿಯ ಬಗ್ಗೆ ನಡೆದ ಚರ್ಚೆಗೆ ಸರಕಾರದಿಂದ ಉತ್ತರವನ್ನು ಕೊಡಿಸಿದರು.