ಮಂತ್ರಿಗಳಿಗೆ ಐಷಾರಾಮಿ ಕಾರು ಖರೀದಿ ಮಾಡಲು ದುಡ್ಡಿದೆ, ಕಲಾವಿದರಿಗೆ ಪಿಂಚಣಿ ನೀಡುವುದಕ್ಕೆ ಹಣವಿಲ್ಲ: ಆರ್. ಅಶೋಕ್
ಆರ್. ಅಶೋಕ್
ಬೆಂಗಳೂರು: ‘ಕಾಂಗ್ರೆಸ್ ಸರಕಾರಕ್ಕೆ ಕನ್ನಡವೆಂದರೆ ನಿಕೃಷ್ಟ, ಕನ್ನಡ ನಾಡಿನ ಕಲೆ ಸಂಸ್ಕೃತಿ ಅಂದರೆ ಕನಿಷ್ಠ. ಸಿಎಂ ಸಿದ್ದರಾಮಯ್ಯ ಸರಕಾರದಲ್ಲಿ ಸಿಕ್ಕಸಿಕ್ಕವರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟು ಮೆರೆಸಲು ದುಡ್ಡಿದೆ, ಶಾಸಕರಿಗೆ, ಮಂತ್ರಿಗಳಿಗೆ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರು ಖರೀದಿ ಮಾಡಲು ದುಡ್ಡಿದೆ, ಕಲಾವಿದರಿಗೆ ಪಿಂಚಣಿ ನೀಡುವುದಕ್ಕೆ ಹಣವಿಲ್ಲ’ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, "ನಿಗಮ ಮಂಡಳಿಗಳಲ್ಲಿ, ಟೆಂಡರ್ ಕಿಕ್ಬ್ಯಾಕ್ಗಳಲ್ಲಿ ನೂರಾರು ಕೋಟಿ ರೂ.ಲೂಟಿ ಮಾಡಲು ದುಡ್ಡಿದೆ, ಆದರೆ ನಾಡಿನ ಹೆಮ್ಮೆಯ ಸಂಗೀತ ಸರಸ್ವತಿ ಪದ್ಮಭೂಷಣ ಡಾ.ಗಂಗೂಬಾಯಿ ಹಾನಗಲ್ ಜ್ಞಾಪಕಾರ್ಥವಾಗಿ ಹುಬ್ಬಳ್ಳಿಯಲ್ಲಿ ಸ್ಥಾಪಿಸಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗುರುಕುಲಕ್ಕೆ ವಾರ್ಷಿಕ 1.25 ಕೋಟಿ ರೂ. ಅನುದಾನ ನೀಡಲು ಸರಕಾರದ ಬಳಿ ದುಡ್ಡಿಲ್ಲ" ಎಂದು ಟೀಕಿಸಿದ್ದಾರೆ.
ಕಲಾವಿದರಿಗೆ ಪಿಂಚಣಿ ನೀಡುವುದಕ್ಕೆ ಹಣವಿಲ್ಲ, ಕಲಾತಂಡಗಳಿಗೆ ಧನ ಸಹಾಯಕ್ಕೆ ದುಡ್ಡಿಲ್ಲ. ರಾಜ್ಯ, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ದುಡ್ಡಿಲ್ಲ. ರಂಗಮಂದಿರ, ಬಯಲು ಮಂದಿರಗಳಿಗೆ ಹಣ ನೀಡುತ್ತಿಲ್ಲ, ಕನ್ನಡ-ಸಂಸ್ಕೃತಿ ಇಲಾಖೆಗೆ ನಿಗದಿ ಹಣ ನೀಡುತ್ತಿಲ್ಲ. ಕಲೆ ಮತ್ತು ಸಂಸ್ಕೃತಿಗೆ ಮೀಸಲು ಹಣವಿಲ್ಲ, ಕಲಾಸಂಘಗಳಿಗೂ ನೀಡುವುದಕ್ಕೂ ರೊಕ್ಕವಿಲ್ಲ. ಇದೇನಾ ನೀವು ನಮ್ಮ ನಾಡಿನ ಕಲೆ ಸಂಸ್ಕೃತಿಗೆ ಬೆಲೆ ನೀಡುವ ಪರಿ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಚುನಾವಣೆ ಬಂದರೆ ಸಾಕು ಭಾಷೆಯ ವಿಷಯದಲ್ಲಿ ರಾಜಕಾರಣ ಮಾಡುವ ಸಿದ್ದರಾಮಯ್ಯನವರು ಕನ್ನಡದ ಕೆಲಸಕ್ಕೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ. ನಾಡು, ನುಡಿ, ಸಂಸ್ಕೃತಿಯ ಬೆಳವಣಿಗೆಗೆ ನೀಡಬೇಕಿದ್ದ ಅನುದಾನಕ್ಕೆ ಕೊಕ್ಕೆ ಹಾಕುವ ಮೂಲಕ ಕಾಂಗ್ರೆಸ್ ಸರಕಾರ ಮಾತೃಭಾಷೆಗೆ, ನಾಡಿನ ಸಂಸ್ಕೃತಿಗೆ ದ್ರೋಹ ಬಗೆದಿದೆ ಎಂದು ಅವರು ದೂರಿದ್ದಾರೆ.
‘ಕನ್ನಡ ರಾಮಯ್ಯ’ನ ನಕಲಿ ಕನ್ನಡ ಪ್ರೀತಿ ನೋಡಿ ಕನ್ನಡಿಗರೇ, ಭ್ರಷ್ಟ ಸಿಎಂ ಸಿದ್ದರಾಮಯ್ಯನವರು ಮದರಸಾಗಳಲ್ಲಿ ಕನ್ನಡ ಕಲಿಸುವುದನ್ನು ಕೈಬಿಟ್ಟಿದ್ದಾರೆ. ಹಾಗಾದರೆ ಮುಸಲ್ಮಾನರು ಕನ್ನಡಿಗರಲ್ಲ ಎಂದೋ ನೀವು ಹೇಳುವುದು?, ಕನ್ನಡ ಕಲಿಸಿದರೆ ತಮ್ಮ ಭ್ರಷ್ಟಾಚಾರ, ಅನಾಚಾರಗಳು ಎಲ್ಲವೂ ಅವರಿಗೆ ಗೊತ್ತಾಗುತ್ತದೆ ಎನ್ನುವ ಭಯ ಕಾಂಗ್ರೆಸ್ ಸರಕಾರಕ್ಕೆ ಇರಬೇಕು. ಮದರಸಾಗಳಲ್ಲಿ ಕನ್ನಡ ಕಲಿಸುವುದಿಲ್ಲ, ಅವರಿಗೆ ಕನ್ನಡ ಬೇಕಾಗಿಲ್ಲ ಎಂದರೆ, ಕೊಟ್ಟಿರುವ ಅನುದಾನವನ್ನು ಹಿಂಪಡೆಯಿರಿ ಹಾಗೂ ಮುಂದೆ ಕೊಡುವ ಅನುದಾನವನ್ನು ನಿಲ್ಲಿಸಿ’ ಎಂದು ಅಶೋಕ್ ಸಲಹೆ ನೀಡಿದ್ದಾರೆ.
ದಸಂಸ ಹೋರಾಟಕ್ಕೆ ಬಿಜೆಪಿ ಬೆಂಬಲ: ‘ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಹಣವನ್ನ ದುರ್ಬಳಕೆ ಮಾಡುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸುವ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ದಲಿತರು, ಹಿಂದುಳಿದವರು, ಬಡವರ ಪರ ದನಿ ಎತ್ತುವವರ ಜೊತೆಗೆ ದನಿಗೂಡಿಸಲು ನಮ್ಮ ಪಕ್ಷ ಸದಾ ಬದ್ಧವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಸರಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲಿದೆ’
-ಆರ್.ಅಶೋಕ್, ಪ್ರತಿಪಕ್ಷ ನಾಯಕ
ನಾಡದ್ರೋಹಿ @INCKarnataka ಸರ್ಕಾರಕ್ಕೆ ಕನ್ನಡವೆಂದರೆ ನಿಕೃಷ್ಟ, ಕನ್ನಡ ನಾಡಿನ ಕಲೆ ಸಂಸ್ಕೃತಿ ಅಂದರೆ ಕನಿಷ್ಠ.
— R. Ashoka (@RAshokaBJP) July 21, 2024
ಸಿಎಂ @siddaramaiah ಅವರ ಸರ್ಕಾರದಲ್ಲಿ ಸಿಕ್ಕಸಿಕ್ಕವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಕೊಟ್ಟು ಮೆರೆಸಲು ದುಡ್ಡಿದೆ, ಶಾಸಕರಿಗೆ, ಮಂತ್ರಿಗಳಿಗೆ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರು ಖರೀದಿ ಮಾಡಲು ದುಡ್ಡಿದೆ, ನಿಗಮ… pic.twitter.com/3Nm3vEWqNW