ಅಲ್ಪಸಂಖ್ಯಾತರ ಇಲಾಖೆ ಮಂಗಳೂರು ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್ ಅಮಾನತು
*ಸಚಿವ ಝಮೀರ್ ಅಹ್ಮದ್ ರಿಂದ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಗೆ ದಿಢೀರ್ ಭೇಟಿ, ಪರಿಶೀಲನೆ
ಮಂಗಳೂರು, ಸೆ.6: ದ.ಕ. ಜಿಲ್ಲಾ ಪ್ರವಾಸದಲ್ಲಿರುವ ವಸತಿ, ವಕ್ಪ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾ ಮಂಡಲವಾದರು. ಈ ವೇಳೆ ತಾಲೂಕು ವಿಸ್ತರಣಾ ಅಧಿಕಾರಿಯನ್ನು ಸ್ಥಳದಲ್ಲೇ ಅಮಾನತು ಮಾಡಿ ಆದೇಶಿಸಿದರು.
ಸಚಿವರು ಮಂಗಳವಾರ ಸಂಜೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರ ಜೊತೆಗೆ ರಸ್ತೆಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಹಾಸ್ಟೆಲ್ ನಲ್ಲಿ ಶುಚಿತ್ವ ಕಾಪಾಡದಿರುವುದು, ಶೌಚಾಲಯ ನಿರ್ವಹಣೆ ಸಮರ್ಪಕವಾಗಿ ಇಲ್ಲದಿರುವುದು ಕಂಡುಬಂದಿದೆ.
ಇದೇ ವೇಳೆ ಅಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಕೊಡುತ್ತಿಲ್ಲ, ವಾರಕ್ಕೊಮ್ಮೆ ಚಿಕನ್ ನೀಡುವ ಬದಲು ಹದಿನೈದು ದಿನಕ್ಕೆ ಒಮ್ಮೆ ಮಾತ್ರ ನೀಡಲಾಗುತ್ತಿದೆ. ಚಾರ್ಟ್ ಪ್ರಕಾರ ಆಹಾರ ಪೊರೈಕೆ ಮಾಡುತ್ತಿಲ್ಲ ಎಂದು ದೂರಿದರು.
ಐದು ವರ್ಷ ಆದರೂ ಬೆಡ್ ಶೀಟ್ ಕೊಟ್ಟಿಲ್ಲ, ತಲೆದಿಂಬು ಇಲ್ಲ, ನಮ್ಮ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಆರೋಪಿಸಿದರು.
ತಕ್ಷಣ ಸಚಿವರು ತಾಲೂಕು ವಿಸ್ತರಣಾ ಅಧಿಕಾರಿ ಮಂಜುನಾಥ್ ಅವರನ್ನು ಸ್ಥಳದಲ್ಲೇ ಅಮಾನತು ಮಾಡಿ ಆದೇಶ ಹೊರಡಿಸಿದರು. ಅಲ್ಲದೆ, ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಜಿನೇಂದ್ರ ಮತ್ತು ಹಾಸ್ಟೆಲ್ ವಾರ್ಡನ್ ಅಶೋಕ್ ರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಈ ಸಂದರ್ಭ ಸಚಿವ ರಹೀಂ ಖಾನ್ ಕೂಡಾ ಹಾಜರಿದ್ದರು.