ಬಿಜೆಪಿಯೊಂದಿಗಿನ ಮೈತ್ರಿಯಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಧಕ್ಕೆ ಆಗಲು ಬಿಡುವುದಿಲ್ಲ: ಎಚ್.ಡಿ.ದೇವೇಗೌಡ
ಬೆಂಗಳೂರು: ಬಿಜೆಪಿಯೊಂದಿಗಿನ ಮೈತ್ರಿಯಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಎಲ್ಲೂ ಧಕ್ಕೆ ಆಗಲು ಬಿಡುವುದಿಲ್ಲ. ಪಕ್ಷ ಬಿಡುವ ಮಾತುಗಳನ್ನಾಡಿರುವವರನ್ನು ಕರೆದು ಚರ್ಚೆ ನಡೆಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬುಧವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜೊತೆ ಸರಕಾರ ಮಾಡಿದಾಗ ಮಂಗಳೂರಿನಲ್ಲಿ ಇಬ್ಬರು ಮುಸ್ಲಿಮರು ಮೃತಪಟ್ಟಿದ್ದರು. ಆಗ ಕುಮಾರಸ್ವಾಮಿ ಅವರು ಪ್ರವಾಸದಲ್ಲಿದ್ದರೂ ನಾನು ದೂರವಾಣಿ ಮೂಲಕ ಮಾತನಾಡಿ ಸ್ಥಳಕ್ಕೆ ಹೋಗುವಂತೆ ಸೂಚಿಸಿದೆ ಎಂದರು.
ಅದರಂತೆ ಕುಮಾರಸ್ವಾಮಿ ಮಂಗಳೂರಿಗೆ ಹೋಗಿ ಹಿಂದೂ-ಮುಸ್ಲಿಮ್ ಸಮುದಾಯದ ಮುಖಂಡರ ಸಭೆ ನಡೆಸಿದ್ದು ಮಾತ್ರವಲ್ಲದೆ, ಆರೋಪಿಗಳಿಗೆ ಶಿಕ್ಷೆ ಕೊಡಿಸಿದರು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಬಿಜೆಪಿಯವರು ಗೃಹ ಸಚಿವರು. ಇಂತಹ ಉದಾಹರಣೆಗಳು ಹತ್ತಾರು ಇದ್ದು, ಈಗಲೂ ನಾವು ಅಲ್ಪಸಂಖ್ಯಾತ ಸಮುದಾಯಕ್ಕೆ ಎಲ್ಲೂ ಧಕ್ಕೆ ಆಗಲು ಬಿಡುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.
ಮೈತ್ರಿಯಿಂದ ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅದರ ಬಗ್ಗೆ ಯಾರಿಗೂ ಕಳವಳ ಬೇಕಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಚರ್ಚೆ ಆಗಿದೆ. ಪ್ರಧಾನಿ ಜತೆ ಇನ್ನೂ ಮಾತುಕತೆ ಆಗಿಲ್ಲ ಎಂದ ಅವರು, ಬಿಜೆಪಿ ಜತೆ ನೇರವಾಗಿ ಅಥವಾ ಪರೋಕ್ಷವಾಗಿ ಮಡಿವಂತಿಕೆ ಕಾಪಾಡಿಕೊಂಡಿರುವ ಒಂದು ಪಕ್ಷ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಬೇಕು ಎಂದು ಬಿಜೆಪಿ ಜತೆ ಎಡಪಕ್ಷಗಳ ಕೆಲ ಮುಖಂಡರು ಕೆಲಸ ಮಾಡಿದ್ದು, ನಮಗೂ ಗೊತ್ತಿದೆ. ಇನ್ನೂ, ನಮ್ಮ ಪಕ್ಷಕ್ಕೆ ಈ ಮೈತ್ರಿಯಿಂದ ಧಕ್ಕೆ ಆಗುವುದಿಲ್ಲ. ಯಾರೂ ಪಕ್ಷ ತೊರೆಯುವುದಿಲ್ಲ. ಕರೆದು ಮಾತನಾಡುತ್ತೇನೆ. ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ನಡೆಸಿದ್ದರು. ಜಲಧಾರೆ ಕಾರ್ಯಕ್ರಮ ನೀಡಿದ್ದರು. ಆದರೆ ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ಅದಕ್ಕೆ ನಾವೇನೂ ಹೆದರುವ ಅವಶ್ಯಕತೆ ಇಲ್ಲ ಎಂದು ಅವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಬಿ.ಎಂ.ಫಾರೂಕ್, ಮಂಜೇಗೌಡ, ಪಕ್ಷದ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಪ್ರಮುಖರಿದ್ದರು.