ಬೆಳಗಾವಿ ಅಧಿವೇಶನಕ್ಕೆ ಹಾಜರಾದ ಶಾಸಕ ಬಿ.ಆರ್.ಪಾಟೀಲ್
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.4: ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ ಸದನದಿಂದ ದೂರ ಉಳಿಯುವುದಾಗಿ ಹೇಳಿದ್ದ ಆಡಳಿತ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಧಾನ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೋಮವಾರ ಕಲಾಪಕ್ಕೆ ಹಾಜರಾಗಿದ್ದರು.
‘ಕೆಆರ್‍ಐಡಿಎಲ್ ಸಂಸ್ಥೆಯಲ್ಲಿ ಅವ್ಯವಹಾರಗಳಾಗಿವೆ. ಶಾಸಕರು ಹಣ ಪಡೆದು ಕಾಮಗಾರಿಗಳನ್ನು ಗುತ್ತಿಗೆ ನೀಡಿದ್ದಾರೆ’ ಎಂಬರ್ಥದಲ್ಲಿ ಸಚಿವ ಕೃಷ್ಣಭೈರೇಗೌಡ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ತಮ್ಮ ಮೇಲೆ ಕೇಳಿಬಂದಿರುವ ಆರೋಪ ಬಗೆಹರಿಯದ ಹೊರತು ತಾವು ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿ.ಆರ್.ಪಾಟೀಲ್ ಪಟ್ಟು ಹಿಡಿದಿದ್ದರು.
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಬಿ.ಆರ್.ಪಾಟೀಲ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಂಧಾನ ಮಾತುಕತೆ ನಡೆಸಿದರು. ಅದರ ಹೊರತಾಗಿಯೂ ಬಿ.ಆರ್.ಪಾಟೀಲ್ ಕಲಾಪದಲ್ಲಿ ಭಾಗವಹಿಸುತ್ತಾರೋ, ಇಲ್ಲವೋ ಎಂಬ ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಎಲ್ಲದಕ್ಕೂ ತೆರೆ ಎಳೆದಿರುವ ಪಾಟೀಲ್, ಸೋಮವಾರ ತಮ್ಮ ಎಂದಿನ ಶೈಲಿಯಲ್ಲೆ ತಲೆಗೆ ಉತ್ತರ ಕರ್ನಾಟಕ ಭಾಗದವರ ಟೋಪಿ ಧರಿಸಿ, ಹಾಜರಾಗಿದ್ದು ವಿಶೇಷವಾಗಿತ್ತು.