ಸರ್ಕಾರಿ ಶಾಲೆಯ ಎಂಟನೇ ತರಗತಿ ಮಕ್ಕಳಿಗೆ ಮತ್ತೆ ಸೈಕಲ್ ವಿತರಿಸುವಂತೆ ಶಾಸಕ ಪ್ರದೀಪ್ ಈಶ್ವರ್ ಆಗ್ರಹ
ಬೆಳಗಾವಿ: ಸರ್ಕಾರಿ ಶಾಲೆ ಎಂಟನೇ ತರಗತಿ ಮಕ್ಕಳಿಗೆ ಮತ್ತೆ ಸೈಕಲ್ ವಿತರಿಸುವಂತೆ ಹಾಗೂ ಎರಡು ಜತೆ ಶೂ, ಸಾಕ್ಸ್ ಬದಲು ನಾಲ್ಕು ಜೊತೆ ಶೂ, ಸಾಕ್ಸ್ ಕೊಡುವಂತೆ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಪ್ರದೀಪ್ ಈಶ್ವರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಮುಂದಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆ ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್ , ʼಇಡೀ ರಾಜ್ಯದಲ್ಲಿ ಸೈಕಲ್ ವಿತರಣೆ ಪುನಾರಂಭಿಸಿ. ಅದು ಯಡಿಯೂರಪ್ಪ ತಂದಿರುವ ಯೋಜನೆ. ದೂರದಿಂದ ಬರುವ ಮಕ್ಕಳಿಗೆ ಸಹಾಯ ಆಗುತ್ತೆ ಅಂತ ಅಶೋಕ್ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ʼಸೈಕಲ್ ವಿತರಣೆ ಬಿಜೆಪಿ ಕಾಲದಲ್ಲೇ ಸ್ಥಗಿತಗೊಂಡಿದೆ. ನಿಮ್ಮವರೇ ಆರಂಭಿಸಿ ನಿಮ್ಮ ಕಾಲದಲ್ಲೇ ಸ್ಥಗಿತ ಆಯ್ತು. ಹೀಗಾಗಬಾರದಿತ್ತು. ಈಗ ನಮ್ಮ ಸರ್ಕಾರ ಪರಿಶೀಲಿಸಿ ಸೈಕಲ್ ವಿತರಣೆಗೆ ಕ್ರಮ ವಹಿಸಲಿದೆ ಎಂದು ತಿರುಗೇಟು ನೀಡಿದರು.