ಕಾಂಗ್ರೆಸ್ ಸರಕಾರ ಬೀಳಿಸಲು ಬಿಜೆಪಿಯಿಂದ 100 ಕೋಟಿ ರೂ. ಆಮಿಷ : ಶಾಸಕ ರವಿ ಗಣಿಗ ಗಂಭೀರ ಆರೋಪ
ಸುಳ್ಳಾರೋಪ ಎಂದ ಬಿಜೆಪಿ ; ಶಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು
ರವಿ ಗಣಿಗ (PC : facebook)
ಬೆಂಗಳೂರು : ‘ಮುಡಾ ಪ್ರಕರಣ’ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರು ಅನುಮತಿ ನೀಡಿದ ಬೆನ್ನಲ್ಲೆ ರಾಜ್ಯ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಈ ಮಧ್ಯೆ, ‘ಕಾಂಗ್ರೆಸ್ ನೇತೃತ್ವದ ಸರಕಾರ ಬೀಳಿಸಲು ಬಿಜೆಪಿ ಆಮಿಷವೊಡುತ್ತಿದೆ’ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
‘ಕಾಂಗ್ರೆಸ್ ಶಾಸಕರನ್ನು ಖರೀದಿಸಲು ವಿಪಕ್ಷ ಬಿಜೆಪಿ 50ರಿಂದ 100 ಕೋಟಿ ರೂ. ಆಮಿಷವೊಡ್ಡುತ್ತಿದೆ ಎಂಬ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ (ಗಣಿಗ) ಹೇಳಿಕೆ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಕಾನೂನು ಕ್ರಮಕ್ಕೆ ಒತ್ತಾಯ: ‘ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ನಾಲ್ಕಾರು ಮುಖಂಡರು, ಕಾಂಗ್ರೆಸ್ ಸರಕಾರವನ್ನು ಬೀಳಿಸಲು ಸಂಚು ನಡೆಸಿದ್ದು ಪ್ರತಿಯೊಬ್ಬ ಶಾಸಕರಿಗೆ 50ರಿಂದ 100 ಕೋಟಿ ರೂ.ಆಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪ ಮಾಡಿದ್ದಾರೆ.
ಇದು ಸುಳ್ಳು ಹಾಗೂ ಸಾಕ್ಷಿರಹಿತ ಮತ್ತು ರಾಜಕೀಯ ದುರುದ್ದೇಶಪೂರ್ವಕವಾಗಿ ತೇಜೋವಧೆ ಮಾಡುವ ದುರುದ್ದೇಶದಿಂದ ಹೇಳಿಕೆಯನ್ನು ನೀಡಿದ್ದು, ಕಾನೂನು ಬಾಹಿರ ಹೇಳಿಕೆಯಾಗಿದೆ. ಹಣ ನೀಡಲು ಪ್ರೇರಣೆ ನೀಡುವುದು ಹಾಗೂ ಹಣ ನೀಡಲು ಮಾಡಿರುವ ಸಂಚನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಭ್ರಷ್ಟಾಚಾರ ತಡೆ ಕಾಯ್ದೆಯ ಉಲ್ಲಂಘನೆಯಾಗಿದೆ. ಆದ್ದರಿಂದ ಶಾಸಕ ರವಿ ಗಣಿಗ ಅವರು 50ರಿಂದ 100ಕೋಟಿ ರೂ.ಹಣ ಅಕ್ರಮ ವಿಲೇವಾರಿಯನ್ನು ಗೌಪ್ಯವಾಗಿಟ್ಟಿರುವ ಸಂಶಯವಿದೆ. ಹೀಗಾಗಿ ಶಾಸಕ ರವಿ ಗಣಿಗ ಅವರ ಮೇಲೆ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಿ.ರಾಜೀವ್, ಪೋಲೀಸರಿಗೆ ನೀಡಿರುವ ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.