ಪ್ರತ್ಯೇಕ ನಾಡಧ್ವಜ ಮಾನ್ಯತೆಗೆ ಶಾಸಕ ರಿಝ್ವಾನ್ ಆಗ್ರಹ
ಬೆಂಗಳೂರು, ನ.1: ಕೇಂದ್ರ ಸರಕಾರ ಕನ್ನಡಿಗರ ಪ್ರತ್ಯೇಕ ನಾಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಕಾಂಗ್ರೆಸ್ ಶಾಸಕ ರಿಝ್ವಾನ್ ಆರ್ಶದ್ ಒತ್ತಾಯಿಸಿದರು.
ಬುಧವಾರ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ, 68ನೆ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಅಸ್ಮಿತೆ ಬಿಂಬಿಸುವ ನಮ್ಮದೇ ಆದ ಕರ್ನಾಟಕದ ಧ್ವಜಕ್ಕೆ ಕೇಂದ್ರ ಸರಕಾರದ ಅಧಿಕೃತ ಮಾನ್ಯತೆ ನೀಡಲು ಮುಂದಾಗಬೇಕು ಎಂದು ಹೇಳಿದರು.
ಕನ್ನಡಿಗರಾದ ನಮಗೆ ಅಧಿಕೃತ ಧ್ವಜ ಬೇಕು. ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಆರು ವರ್ಷದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಒತ್ತಡ ಹಾಕಬೇಕು. ಅಲ್ಲದೆ, ನಾಡಧ್ವಜ ಎನ್ನುವುದು ಸಮಸ್ತ ಕನ್ನಡಿಗರ ಅಭಿಮಾನ, ಹೆಮ್ಮೆಯನ್ನು ಸಾರುವ ಸಂಗತಿಯಾಗಿದೆ ಎಂದು ಅವರು ನುಡಿದರು.
ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ) ಹಾಗೂ ಕೇಂದ್ರ ಸರಕಾರದ ಅರೆಸೇನಾ ಪಡೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಅವಕಾಶ ಕಲ್ಪಿಸಬೇಕು.ಆದರೆ, ಕನ್ನಡವನ್ನು ಕಡೆಗಣಿಸುವ ಕೆಲಸ ಕೇಂದ್ರ ಮಾಡುತ್ತಿದ್ದು, ಇದು ಖಂಡನೀಯ. ಉದ್ಯೋಗ ಪರೀಕ್ಷೆಯನ್ನು ಹಿಂದಿ ಹಾಗೂ ಇಂಗ್ಲಿಷ್ ಕಡ್ಡಾಯ ಮಾಡುತ್ತಿರುವುದಿಂದ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏಕೀಕರಣದಲ್ಲಿ ತ್ಯಾಗ ಮಾಡಿದವರನ್ನು ಸ್ಮರಿಸಬೇಕು. 50 ವರ್ಷಗಳ ಹಿಂದೆ ದೇವರಾಜ್ ಅರಸು ಅವರು ಕರ್ನಾಟಕ ಎಂದು ನಾಮಾಕರಣ ಮಾಡಿದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 50ನೆ ವರ್ಷ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಅವರು ಬಣ್ಣಿಸಿದರು.