ಶಾಸಕ ವಿನಯ್ ಕುಲಕರ್ಣಿ ಪ್ರಕರಣ ಸಿಐಡಿ ಹೆಗಲಿಗೆ
ವಿನಯ್ ಕುಲಕರ್ಣಿ
ಬೆಂಗಳೂರು : ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಹಾವೇರಿ ಮೂಲದ ಮಹಿಳೆ ಸಂಜಯನಗರ ಪೊಲೀಸ್ ಠಾಣೆಗೆ ನೀಡಿರುವ ದೂರು ಹಾಗೂ ಶಾಸಕರು ನೀಡಿರುವ ಪ್ರತಿದೂರುಗಳ ತನಿಖೆಯನ್ನು ಸಿಐಡಿ ಹೆಗಲಿಗೆ ವಹಿಸಲಾಗಿದೆ.
ಗುರುವಾರ ಈ ಸಂಬಂಧ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ‘ಶಾಸಕ ವಿನಯ್ ಕುಲಕರ್ಣಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ’ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ದೂರುದಾರೆ ಮಹಿಳೆ ವಿರುದ್ಧವೂ ಶಾಸಕ ವಿನಯ್ ಕುಲಕರ್ಣಿ ಪ್ರತಿ ದೂರು ನೀಡಿದ್ದು, ಈ ಎರಡೂ ದೂರುಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ಹಾವೇರಿಯಲ್ಲಿ ರೈತ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ವೇಳೆ ವಿನಯ್ ಕುಲಕರ್ಣಿ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಸಭ್ಯತೆಯಿಂದ ಮಾತನಾಡುತ್ತಿದ್ದರು. ನಂತರದ ದಿನಗಳಲ್ಲಿ ಅಸಭ್ಯವಾಗಿ, ಅಶ್ಲೀಲ ಸಂಭಾಷಣೆ ನಡೆಸುತ್ತಿದ್ದರು. 2022ರಲ್ಲಿ ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದ ವೇಳೆ ಹೆಬ್ಬಾಳದ ತಮ್ಮ ಮನೆಗೆ ಕರೆಸಿಕೊಂಡಿದ್ದಲ್ಲದೆ, ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು.