ಶಾಸಕರು ಕಲಾಪದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಯು.ಟಿ. ಖಾದರ್
ಬೆಂಗಳೂರು: ಎಲ್ಲ ಶಾಸಕರು ಅಧಿವೇಶನ ಕಲಾಪದ ನೀತಿ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಶುಕ್ರವಾರ ನಗರದ ರಾಜಭವನ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಕರ್ನಾಟಕ ವಿಧಾನ ಮಂಡಲ ತರಬೇತಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ 16ನೆ ವಿಧಾನಸಭೆಯ ಸದಸ್ಯರುಗಳಿಗೆ ಬಜೆಟ್ ಕುರಿತು ತರಬೇತಿ ಶಿಬಿರ ಹಾಗೂ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮದ ವರದಿಗಾರರಿಗೆ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಸಕರು ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಚರ್ಚಿಸಬೇಕು. ಬಜೆಟ್ ಬಗ್ಗೆ ಸಮರ್ಪಕವಾಗಿ ಅರ್ಥ ಮಾಡಿಕೊಂಡು ಚರ್ಚೆಯಲ್ಲಿ ಭಾಗವಹಿಸುವುದರಿಂದ ವ್ಯಕ್ತಿ ವಿಕಸನಕ್ಕೆ ಅವಕಾಶ ಸಿಗುತ್ತದೆ. ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು ಜೊತೆ ಜೊತೆಯಾಗಿ ಸಾಗಬೇಕು ಎಂದು ಯು.ಟಿ.ಖಾದರ್ ಹೇಳಿದರು.
ಶಾಸಕರು ತಮ್ಮ ತಮ್ಮ ಕ್ಷೇತ್ರ ರಸ್ತೆ, ಸೇತುವೆಗಳಿಗೆ ಸೀಮಿತವಾದ ನೀತಿ ನಿರೂಪಣೆ, ಶಾಸನ ರಚನೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶಾಸಕರು ವಿವಿಧ ವಿಷಯಗಳ ಬಗ್ಗೆ, ವಿಧಾನ ಮಂಡಲದ ಕಲಾಪಗಳ ಬಗ್ಗೆ ಅಧಿಕಾರಿಗಳು, ಹಿರಿಯ ಶಾಸಕರ ಜೊತೆ ಚರ್ಚೆ ಮಾಡಿ ಹೆಚ್ಚೆಚ್ಚು ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಆಕರ್ಷಕವಾಗಿ ತಮ್ಮ ವಿಚಾರ ಮಂಡನೆ ಮಾಡಲು ಪ್ರಯತ್ನಿಸಬೇಕು ಎಂದು ಯು.ಟಿ.ಖಾದರ್ ಕಿವಿಮಾತು ಹೇಳಿದರು.
ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಶಾಸಕರು ಉತ್ತಮ ರೀತಿಯಲ್ಲಿ ಅಧ್ಯಯನ ನಡೆಸಿಕೊಂಡು ಬಂದರೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ವಿಧಾನ ಮಂಡಲದ ಗ್ರಂಥಾಲಯದಲ್ಲಿ ಪುಸ್ತಕ ಭಂಡಾರವೇ ಇದೆ. ಜೊತೆಗೆ ಕಲಾಪಗಳ ಸಂಪೂರ್ಣ ಮಾಹಿತಿಯೇ ಇದೆ. ಶಾಸಕರು ಇದನ್ನು ಬಳಸಿಕೊಂಡು ಉತ್ತಮ ಸಂಸದೀಯ ಪಟುಗಳಾಗಿ ಹೊರಹೊಮ್ಮಬೇಕು ಎಂದರು.
ಶಾಸಕರಿಗೆ ತರಬೇತಿ ನೀಡಿದರೆ ಸದನದಲ್ಲಿ ಯಾವರೀತಿ ಪ್ರಶ್ನೆ ಕೇಳಬೇಕು, ಯಾವ ರೀತಿ ಉತ್ತರ ನೀಡಬೇಕು ಎನ್ನುವ ಬಗ್ಗೆ ಮಾಹಿತಿ ದೊರೆಯುತ್ತದೆ. ಆಯವ್ಯಯ ಹಾಗೂ ಬಿಲ್ಲಿನ ಬಗ್ಗೆ ಚರ್ಚಿಸುವಾಗ ನಿಮ್ಮಲ್ಲಿರುವ ವಿಚಾರವನ್ನು ಹೇಳುವ ಎಲ್ಲಾ ಹಕ್ಕಿದೆ. ಸದನ ಪ್ರಾರಂಭದಿಂದ ಸದನ ಮುಗಿಯುವವರೆಗೂ ಸದಸ್ಯರುಗಳು ಇರಬೇಕು. ಶಾಸನ ಪ್ರಾರಂಭವಾದಾಗ ಅಜೆಂಡಾ ಓದಬೇಕು ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ಶಿಬಿರದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪತ್ರಕರ್ತ ರವಿ ಹೆಗಡೆ, ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಸೇರಿದಂತೆ ಹಲವು ಸಚಿವರು, ಶಾಸಕರು ಉಪಸ್ಥಿತರಿದ್ದರು.