ಹಣ ಪಡೆದು ವಂಚನೆ: ಆರೋಪಿ ಬಂಧನ
ಬೆಂಗಳೂರು: ಸ್ಟಾರ್ಟ್‍ಆಪ್ ಕಂಪೆನಿಯೊಂದರಲ್ಲಿ ಕೈ ತುಂಬ ಸಂಬಳ ಕೊಡುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ಗುಂಪೊಂದರ ಪ್ರಮುಖ ಆರೋಪಿಯನ್ನು ನಗರದ ವೈಟ್‍ಫೀಲ್ಡ್ ಠಾಣೆ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಪವನ್ ಕುಮಾರ್ ಕೊಲ್ಲಿ ಬಂಧಿತ ಆರೋಪಿ. ಮಧು ಹಾಗೂ ರತ್ನಕಾಂತ್ ಎಂಬ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.
ಸಿಮಾಖ್ ತಂತ್ರಜ್ಞಾನ ಮತ್ತು ಮಾಂಟಿ ಕಾಪ್ರ್ಸ್ ಎಂಬ ಕಂಪೆನಿ ತೆರೆದಿದ್ದ ಆರೋಪಿಗಳು ಆಂಧ್ರ ಮೂಲದ ವಿದ್ಯಾವಂತ ಯುವ ಸಮುದಾಯವನ್ನು ಗುರಿಪಡಿಸಿ ಹಣ ಪಡೆದು ವಂಚಿಸುತ್ತಿದ್ದರು. ಹೈಫೈ ಟೆಕ್ ಪಾರ್ಕ್‍ಗಳಲ್ಲಿ ಕಚೇರಿ ತೆರೆಯುತ್ತಿದ್ದ ಆರೋಪಿಗಳು ಪರಿಚಯಸ್ಥರ ಮೂಲಕ ನಿರುದ್ಯೋಗಿಗಳಿಗೆ ಗಾಳ ಹಾಕುತ್ತಿದ್ದರು. ತಮ್ಮ ಕಂಪೆನಿಯಲ್ಲಿ ಅಥವಾ ಬೇರೆ ಕಂಪೆನಿಯಲ್ಲಿ ಕೆಲಸ ಹಾಗೂ ವರ್ಷಕ್ಕೆ ಐದು ಲಕ್ಷ ರೂ. ಪ್ಯಾಕೇಜ್ ಕೊಡುವುದಾಗಿ ಭರವಸೆ ನೀಡುತ್ತಿದ್ದರು.
ನಂತರ ಒಬ್ಬೊಬ್ಬರಿಂದ ಲಕ್ಷ ಲಕ್ಷ ರೂ. ಹಣ ಪಡೆದು, ಒಂದು ಸೆಕೆಂಡ್ ಹ್ಯಾಂಡ್ ಲ್ಯಾಪ್‍ಟಾಪ್ ಕೊಟ್ಟು ಕೆಲಸಕ್ಕೆ ನೇಮಿಸಿಕೊಂಡಂತೆ ನಾಟಕವಾಡುತ್ತಿದ್ದರು. ಬಳಿಕ, ಒಂದು ತಿಂಗಳ ಸಂಬಳವನ್ನೂ ಕೊಡುತ್ತಿದ್ದ ಆರೋಪಿಗಳು, ನಂತರ ಕಂಪೆನಿ ಬಂದ್ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಇದೇ ರೀತಿ ನಗರದ ಬೇರೆ ಬೇರೆ ಭಾಗಗಳಲ್ಲಿಯೂ ವಂಚಿಸಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ವೈಟ್‍ಫೀಲ್ಡ್ ಠಾಣಾ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಇದುವರೆಗೆ ಸುಮಾರು 20 ಕೋಟಿ ರೂ.ಗೂ ಅಧಿಕ ಹಣ ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.