ಮುಂಗಾರು ಅಧಿವೇಶನ | ಕಲಾಪದಲ್ಲಿ ಗದ್ದಲದ ನಡುವೆ 3 ವಿಧೇಯಕ ಮಂಡನೆ
ಬೆಂಗಳೂರು : ವಿಧಾನಸಭೆ ಕಲಾಪದಲ್ಲಿ ಗದ್ದಲದ ನಡುವೆಯೇ ರಾಜ್ಯ ಸರಕಾರದ ಮೂರು ಮಹತ್ವದ ಮಸೂದೆಗಳನ್ನು ಮಂಡನೆ ಮಾಡಲಾಯಿತು.
ಶುಕ್ರವಾರ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವ ಎಚ್.ಕೆ.ಪಾಟೀಲ್ ಅವರು, 2024ನೆ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.
ಅದೇ ರೀತಿ, 2024ನೆ ಸಾಲಿನ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ಎರಡನೇ ತಿದ್ದುಪಡಿ) ವಿಧೇಯಕ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಪರವಾಗಿ 2024ನೇ ಸಾಲಿನ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕವನ್ನು ಮಂಡಿಸಿದರು.
ಈ ವೇಳೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಧ್ವನಿ ಮತಕ್ಕೆ ಹಾಕಿದಾಗ ಸದನ ಮೂರು ವಿಧೇಯಕಗಳನ್ನು ಅಂಗೀಕರಿಸಿತು. ಅಲ್ಲದೆ, ವಿಪಕ್ಷ ಸದಸ್ಯರಿಗೆ ಧರಣಿ ಕೈಬಿಟ್ಟು ವಿಧೇಯಕಗಳ ಚರ್ಚೆಯಲ್ಲಿ ಪಾಲ್ಗೊಳ್ಳಿ. ಇದು ಸಹ ಮುಖ್ಯ ಎಂದು ಪದೇ ಪದೇ ಮನವಿ ಮಾಡಿಕೊಂಡ ದೃಶ್ಯ ಕಂಡಿತು.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕವೂ ಮಂಡಳಿ ರಚನೆ ಹಾಗೂ ರಾಜ್ಯದಲ್ಲಿನ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿಯನ್ನು ಕಲ್ಪಿಸುವ ಹಣಕಾಸು ಯೋಜನೆಗಳಿಗಾಗಿ ನಿಧಿಯನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ.
ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ಎರಡನೆ ತಿದ್ದುಪಡಿ) ವಿಧೇಯಕವೂ ವಿಧಾನಸಭೆ ಅಥವಾ ಪರಿಷತ್ತಿನ ಸದಸ್ಯರಾಗಿರುವವರು ಮುಖ್ಯಮಂತ್ರಿಗಳ ಕಾರ್ಯದರ್ಶಿ, 1 ಮತ್ತು ಎರಡು ಹುದ್ದೆಗೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹುದ್ದೆಗೆ ಮತ್ತು ರಾಜ್ಯ ನೀತಿ ಮತ್ತು ಯೋಜನೆ ಆಯೋಗದ ಉಪಾಧ್ಯಕ್ಷರ ಹುದ್ದೆಗೆ ನೇಮಕ ಮಾಡುವ ಸಲುವಾಗಿ ಅನರ್ಹತೆಯಿಂದ ವಿನಾಯಿತಿ ನೀಡುವ ಉದ್ದೇಶ ಹೊಂದಿದೆ.