ಅಧಿವೇಶನ | ನಾಲೆಗಳಿಗೆ ಅನಧಿಕೃತ ಕೊಳವೆ ಹಾಕಲು ನಿರ್ಬಂಧ : ನೀರಾವರಿ ತಿದ್ದುಪಡಿ ವಿಧೇಯಕ ಮಂಡನೆ
ಬೆಂಗಳೂರು: ನೀರಾವರಿ ಪ್ರದೇಶದಲ್ಲಿನ ನಾಲೆಗಳಿಗೆ ಕಾನೂನುಬಾಹಿರವಾಗಿ ನೀರಿನ ಕೊಳವೆಗಳನ್ನು ಹಾಕುವುದನ್ನು ತಡೆಯಲು ಮತ್ತು ವಲಯ ಫಲಾನುಭವಿಗಳಿಗೆ ನೀರು ತಲುಪುವಂತೆ ನೋಡಿಕೊಳ್ಳುವ ಉದ್ದೇಶದಿಂದ ‘ಕರ್ನಾಟಕ ನೀರಾವರಿ(ತಿದ್ದುಪಡಿ)ವಿಧೇಯಕವನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಂಡನೆ ಮಾಡಿದ್ದಾರೆ.
ಸೋಮವಾರ ವಿಧಾನಸಭೆಯ ಶಾಸನ ರಚನಾ ಕಲಾಪದಲ್ಲಿ ವಿಧೇಯಕವನ್ನು ಮಂಡಿಸಿದ್ದು, ಕರ್ನಾಟಕ ನೀರಾವರಿ ಅಧಿನಿಯಮ-1965ಕ್ಕೆ ತಿದ್ದುಪಡಿ ತರಲು ಈ ವಿಧೇಯಕ ಮಂಡಿಸಲಾಗಿದೆ. ಕೃಷಿ ಉಪಕರಣಗಳು, ನಾಲೆ, ನೀರು ಪೂರೈಕೆ ಪ್ರದೇಶ, ನೀರಾವರಿ ನ್ಯಾಯಾಲಯ, ಕಾರ್ಯಪಡೆ ಮತ್ತು ಕಾಲುವೆಯಿಂದ ನೀರಿನ ಅನಧಿಕೃತ ಬಳಕೆ ಎಂಬ ಹೊಸ ಪರಿಭಾಷೆಗಳನ್ನು ಸೇರಿಸಲಾಗುತ್ತದೆ. ಭೂಸ್ವಾಧೀನ ಅಧಿನಿಯಮ -1894ರ ಬದಲಾಗಿ ಭೂ ಆರ್ಜನೆ, ಪುನರ್ ವ್ಯವಸ್ಥೆಯಲ್ಲಿ ನ್ಯಾಯೋಚಿತ ಪಾಲನೆ ಮತ್ತು ಪಾರದರ್ಶಕತೆ ಹಕ್ಕು ಅಧಿನಿಯಮ-2013ನ್ನು ಪ್ರತಿಯೋಜಿಸಲಾಗುತ್ತದೆ. ಅಂತರ್ ಜಲವನ್ನು ಹೊರತೆಗೆಯಲು ಮತ್ತು ಬಳಸಲು ಅನುಮತಿ ಮಂಜೂರು ಮಾಡಲು ಅಸ್ತಿತ್ವದಲ್ಲಿರುವ ಅಂತರ್ ಜಲ ಬಳಕೆದಾರರ ನೋಂದಣಿ ಮಾಡಲು 28 ಎ ಮತ್ತು 28 ಬಿ ಪ್ರಕರಣಗಳ ಉಲ್ಲಂಘನೆಗಾಗಿ ದಂಡ ವಿಧಿಸುವ ಉದ್ದೇಶವನ್ನು ಈ ವಿಧೇಯಕ ಹೊಂದಿದೆ.
ಅಪರಾಧಿ ಎಂದು ನಿರ್ಣಯವಾದ ಮೇಲೆ ಶಿಕ್ಷೆಯ ಅವಧಿಯನ್ನು ಹೆಚ್ಚಿಸಲು, ಶಿಕ್ಷೆಯ ಕಾಲಾವಧಿಯನ್ನು ವಿಸ್ತರಿಸಲು ಹಾಗೂ ದಂಡದ ಮೊತ್ತ ಹೆಚ್ಚಿಸಲಾಗುತ್ತದೆ. ನೀರಾವರಿ, ನ್ಯಾಯಾಲಯದ ಅಂತರ್ನಿಹಿತ ಅಧಿಕಾರವನ್ನು ಉಳಿಸುವಿಕೆ, ವಿಚಾರಣೆ ಸ್ಥಳ, ಸಾಕ್ಷ್ಯಗಳ ಕಾರ್ಯವಿಧಾನ, ವಿಚಾರಣೆ ಮತ್ತು ಸಮನ್ಸ್ ಮಾಡುವುದು ಇತ್ಯಾದಿಗಳನ್ನು ಸೇರಿಸಲಾಗುತ್ತದೆ. ತ್ವರಿತ ವಿಲೇವಾರಿಗಾಗಿ ಆರು ತಿಂಗಳ ಕಾಲಾವಧಿಯನ್ನು ನಿಗದಿಪಡಿಸಲು ಈ ವಿಧೇಯಕವನ್ನು ಮಂಡಿಸಲಾಗಿದೆ.