ಮುಂಗಾರು ಅಧಿವೇಶನ | ಕರಾವಳಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಪಟ್ಟು
ಬೆಂಗಳೂರು : ಈ ಬಾರಿ ಮಳೆ ಹೆಚ್ಚಾಗಿರುವ ಪರಿಣಾಮ ಭಾರೀ ನಷ್ಟ ಸಂಭವಿಸಿದ್ದು, ರಾಜ್ಯ ಸರಕಾರ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಅಡಿ ಅನುದಾನ ಘೋಷಣೆ ಮಾಡಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿ ಸದಸ್ಯ ಹರೀಶ್ ಪೂಂಜ ವಿಷಯ ಪ್ರಸ್ತಾಪಿಸಿ, ಮಳೆಯಿಂದಾಗಿ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅನುದಾನ ಬೇಕಾಗಿದ್ದು, ರಾಜ್ಯ ಸರಕಾರ ಗಮನ ಹರಿಸಬೇಕು ಎಂದು ಹೇಳಿದರು.
ಈ ಹಿಂದೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಯಿಂದ ಅನಾಹುತ ಸಂಭವಿಸಿದಾಗ ಅಂದಿನ ಬಿಜೆಪಿ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಅದೇ ರೀತಿ ಉತ್ತರ ಕರ್ನಾಟಕ ಭಾಗಕ್ಕೂ ವಿಶೇಷ ಪ್ಯಾಕೇಜ್‍ಗಳನ್ನು ಘೋಷಣೆ ಮಾಡಿಕೊಂಡು ಬರಲಾಗುತ್ತಿದೆ. ಇದೇ ಮಾದರಿಯಲ್ಲಿ ಇದೀಗ ಕರಾವಳಿ ಭಾಗಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ಮನವಿ ಮಾಡಿದರು.
ಕರಾವಳಿ ಭಾಗ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಅಗತ್ಯವಿದೆ. ಶಾಸಕರ ಅನುದಾನದಲ್ಲಿ ವ್ಯತ್ಯಾಸ ಬೇಡ. ಅಲ್ಲದೇ, ಹೊಸ ಸರಕಾರ ಬಂದ ನಂತರ ಅನುದಾನ ತೀರ ಕಡಿಮೆ ಆಗಿದೆ ಎಂದು ಅವರು ಉಲ್ಲೇಖಿಸಿದರು.
ಇದಕ್ಕೆ ದನಿಗೂಡಿಸಿದ ಸುನೀಲ್ ಕುಮಾರ್, ಎನ್‍ಡಿಆರ್‌ಎಫ್ ಅಡಿ ಅನುದಾನ ನೀಡಿದರೆ ರಸ್ತೆ ದುರಸ್ಥಿ ಸಾಧ್ಯವೇ ಇಲ್ಲ. ಲೋಕೋಪಯೋಗಿ ಇಲಾಖೆ ಅಡಿಯಲ್ಲಿಯೇ ಅನುದಾನ ನೀಡಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿ, ಈ ಹಿಂದೆ ಅನಾಹುತ ಸಂಭವಿಸಿದಾಗ ನಾವು ಅನುದಾನ ನೀಡುವ ಸಂದರ್ಭದಲ್ಲಿ ಅಲ್ಲಿ ಯಾವ ಪಕ್ಷ ಇದೆ ಎಂದು ನೋಡಿಲ್ಲ. ಅತಿಯಾದ ತಾರತಮ್ಯ ಮಾಡಲು ಹೋಗಬೇಡಿ. ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಲಿ ಎಂದು ತಿಳಿಸಿದರು.
ಇದಕ್ಕೆ ಉತ್ತರಿಇದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಮಳೆಗಾಲದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ತಾತ್ಕಲಿಕವಾಗಿ ಕ್ರಮ ಕೈಗೊಂಡು ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.