ಕಾವೇರಿನಾಡು ಕೊಡಗಿನಲ್ಲಿ ಮುಂಗಾರು ದುರ್ಬಲ; ಸ್ಪ್ರಿಂಕ್ಲರ್‌ಗಳ ಮೊರೆ ಹೋದ ಕಾಫಿ, ಕಾಳು ಮೆಣಸು ಬೆಳೆಗಾರರು
ಮಡಿಕೇರಿ, ಜೂ.24: ಕೊಡಗು ಜಿಲ್ಲೆಯ ಬೆಳೆಗಾರರ ಪರಿಸ್ಥಿತಿ ಪ್ರತಿವರ್ಷ ಬಾಣಲೆಯಿಂದ ಬೆಂಕಿಗೆ ಬೀಳುವಂತಾಗುತ್ತಿದೆ. ಪ್ರತಿ ಬಾರಿ ಅತಿವೃಷ್ಟಿಯಿಂದ ಕಂಗೆಡುವ ಬೆಳೆಗಾರರು ಪ್ರಸಕ್ತ ಮಳೆಯ ಕೊರತೆಯನ್ನು ಎದುರಿಸುತ್ತಿದ್ದು, ಉತ್ತಮ ಮಳೆಯಾಗಬೇಕಾದ ಜೂನ್ ತಿಂಗಳಿನಲ್ಲೇ ಸ್ಪ್ರಿಂಕ್ಲರ್ ನೀರಿಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಕಾವೇರಿನಾಡು ಕೊಡಗಿನ ಇತಿಹಾಸದಲ್ಲಿಯೇ ಕಾಫಿ ತೋಟಗಳಿಗೆ ಮಳೆಗಾಲದಲ್ಲಿ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತಿರುವುದು ಇದೇ ಮೊದಲು ಎಂದು ಅಭ್ಯತ್ ಮಂಗಲದ ಕಾಫಿ ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.
ಅಲ್ಪಸ್ವಲ್ಪ ನೀರು ಇರುವ ಪ್ರದೇಶಗಳಲ್ಲಿ ಸ್ಪ್ರಿಂಕ್ಲರ್ ಬಳಸಬಹುದಾಗಿದೆ. ಆದರೆ, ನದಿ ಬತ್ತಿ ಹೋಗಿರುವ ವ್ಯಾಪ್ತಿಯಲ್ಲಿ ನೀರು ಇಲ್ಲದೆ ಕಾಫಿ ಹಾಗೂ ಕಾಳು ಮೆಣಸು ಗಿಡಗಳು ಸೊರಗುತ್ತಿವೆ. ಕಾಫಿಗೆ ಈಗ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇದೆ. ಆದರೆ, ಉತ್ತಮ ಇಳುವರಿಯನ್ನು ತೆಗೆಯಬೇಕಾದ ಜವಾಬ್ದಾರಿ ಬೆಳೆಗಾರನ ಮೇಲಿದೆ. ಬೆಳೆಯ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿಯನ್ನು ಎದುರು ನೋಡಬೇಕಾದರೆ ಸಕಾಲದಲ್ಲಿ ಹದವಾದ ಮಳೆಯಾಗಬೇಕಾಗುತ್ತದೆ. ಈ ಬಾರಿ ಜೂನ್ ಕೊನೆಯ ವಾರವಾದರೂ ನಿರೀಕ್ಷಿತ ಮಳೆಯಾಗದೆ ಇರುವುದರಿಂದ ಬೆಳೆಗಾರರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಮಳೆಯಾದರೆ ಮಾತ್ರ ಕಾಫಿ ಗಿಡಗಳಿಗೆ ಗೊಬ್ಬರ ಹಾಕಲು ಸಾಧ್ಯವಾಗುತ್ತದೆ. ಸರಿಯಾದ ಸಮಯದಲ್ಲಿ ಗೊಬ್ಬರ ದೊರೆತಾಗ ಬೆಳೆಯೂ ಉತ್ತಮ ರೀತಿಯಲ್ಲಿರುತ್ತದೆ. ಆದರೆ, ಪ್ರಸಕ್ತ ಮಳೆಯೇ ಬಾರದಿರುವುದರಿಂದ ಕಾಫಿ ಇಳುವರಿ ಕೈಕೊಡುವ ಎಲ್ಲಾ ಸಾಧ್ಯತೆಗಳಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಪ್ಪುಚಿನ್ನವೆಂದೇ ಕರೆಯಲ್ಪಡುವ ಕಾಳು ಮೆಣಸು ಕಾಫಿ ಬೆಳೆಗಾರನ ಕಷ್ಟದ ಕಾಲದಲ್ಲಿ ನೆರವಿಗೆ ಬರುವ ಪ್ರಮುಖ ವಾಣಿಜ್ಯ ಬೆಳೆ. ಆದರೆ, ಈ ಮೆಣಸಿನ ಬಳ್ಳಿಗೂ ನೀರಿನ ಅಗತ್ಯ ಇರುವುದರಿಂದ ಸ್ಪಿಂಕ್ಲರ್ ಮೂಲಕವೇ ನೀರು ಹಾಯಿಸಬೇಕಾಗಿದೆ. ಕಾಫಿ ಕೈಕೊಟ್ಟರೆ ಕಾಳು ಮೆಣಸು ಕೈಹಿಡಿಯುತ್ತದೆ ಎನ್ನುವ ಪರಿಸ್ಥಿತಿ ಈಗ ಇಲ್ಲ. ಮಳೆಯಿಲ್ಲದೆ ಹಲವು ತೋಟಗಳಲ್ಲಿ ಕಾಳು ಮೆಣಸು ಬಳ್ಳಿಗಳು ಒಣಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಅತಿವೃಷ್ಟಿ ಮತ್ತು ಪ್ರವಾಹದಿಂದ ಅಪಾರ ಬೆಳೆ ನಷ್ಟ ಅನುಭವಿಸುತ್ತಿರುವ ಬೆಳೆಗಾರರು ಈ ಬಾರಿ ಮಳೆ ಇಲ್ಲದೆ ಕಂಗಾಲಾಗಿದ್ದಾರೆ.
ಭತ್ತ ಮತ್ತಿತರ ಬೆಳೆಗಳನ್ನು ಬೆಳೆಯುವ ಜಿಲ್ಲೆಯ ಕೃಷಿಕ ವರ್ಗ ಮಳೆಗಾಲದ ಮಳೆಯಲ್ಲಿ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಬೇಕಾಗಿ ತ್ತು. ಆದರೆ, ಮಳೆ ಬಾರದೆ ಇರುವುದರಿಂದ ಮತ್ತು ಬತ್ತಿ ಹೋದ ನದಿ, ಕೆರೆ, ಹೊಳೆಯಲ್ಲಿ ನೀರು ಸಿಗದೆ ಇರುವುದರಿಂದ ಒಣಗಿದ ಕೃಷಿ ಭೂಮಿಯನ್ನು ನೋಡುತ್ತಾ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. ಕರ್ನಾಟಕ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಿಗೂ ಕುಡಿಯಲು ಹಾಗೂ ಕೃಷಿ ಕಾರ್ಯಕ್ಕೆ ನೀರು ಒದಗಿ ಸುತ್ತಿದ್ದ ಕಾವೇರಿ ನಾಡು ಕೊಡಗು ಇಂದು ಹನಿ ನೀರಿಗಾಗಿ ಪರಿತಪಿಸಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಜೂನ್ ತಿಂಗಳಿನಲ್ಲಿ ಮಳೆಯ ಕೊರತೆ ಎದುರಾಗಿ ಜುಲೈ ಅಂತ್ಯ ಅಥವಾ ಆಗಸ್ಟ್ ತಿಂಗಳಿನಲ್ಲಿ ಅತಿವೃಷ್ಟಿ ಎದುರಾದರೆ ಕೃಷಿ ಕ್ಷೇತ್ರ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.