ಗೃಹಲಕ್ಷ್ಮಿ ಯೋಜನೆ; 22.90 ಲಕ್ಷಕ್ಕೂ ಅಧಿಕ ಮಹಿಳೆಯರ ನೋಂದಣಿ
ಬೆಂಗಳೂರು, ಜು. 23: ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಮಹತ್ವದ ಮನೆ ಯಜಮಾನಿಗೆ 2 ಸಾವಿರ ರೂ.ನಗದು ನೀಡುವ ‘ಗೃಹಲಕ್ಷ್ಮಿ ಯೋಜನೆ’ಯಡಿ ಈವರೆಗೂ 22.90 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ಜು.19ರಿಂದ ‘ಗೃಹ ಲಕ್ಷ್ಮಿ ಯೋಜನೆ’ಗೆ ನೋಂದಣಿ ಆರಂಭಿಸಿದ್ದು, ಜು.22ರ ವರೆಗೆ ಒಟ್ಟು 22,90,782 ಮಂದಿ ನೋಂದಣಿ ಮಾಡಿಕೊಂಡಿದ್ದು, ಜು.22ರಂದು 14,16,462 ಮಂದಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.
ಸರ್ವರ್ ಸಮಸ್ಯೆ: ‘ಗೃಹಲಕ್ಷ್ಮಿ ಯೋಜನೆ’ಗೆ ನೋಂದಣಿಗೆ ಸಾರ್ವಜನಿಕರು ‘ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ’ಗಳಿಗೆ ಎಡತಾಕುತ್ತಿದ್ದು, ಸೇವಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಸಂಕಷ್ಟಕ್ಕೆ ಅನುಭವಿಸಬೇಕಾಯಿತು. ಹೀಗಾಗಿ ಈ ಸೇವಾ ಕೇಂದ್ರಗಳಲ್ಲಿ ಮಹಿಳೆಯರ ಸಾಲುಗಟ್ಟಿ ನಿಲ್ಲುವಂತೆ ಆಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೋಂದಣಿಗೆ ಪ್ರತಿ ಕೇಂದ್ರಕ್ಕೆ ನಿತ್ಯ 60 ಮಂದಿಯಂತೆ ಫಲಾನುಭವಿಗಳಿಗೆ ಎಸ್‍ಎಂಎಸ್ ಮೂಲಕ ಸಂದೇಶ ಕಳುಹಿಸಿದ್ದೇವೆ. ಅದೇ ಸಮಯದಲ್ಲಿ ಆ ನಿಗದಿತ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಬೇಕು. ಉದ್ದೇಶಿತ ಯೋಜನೆಗೆ ನೋಂದಣಿ ಮಾಡಲು ಯಾವುದೇ ದಿನಾಂಕದ ಗಡುವು ವಿಧಿಸಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.