ಮೋದಿ ಸರಕಾರದ ಅವಧಿಯಲ್ಲಿ 4 ಲಕ್ಷಕ್ಕೂ ಅಧಿಕ ರೈತರು ಮೃತ್ಯು: ವಿಜೂ ಕೃಷ್ಣನ್ ಆರೋಪ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು, ಅ.9: ಮೋದಿ ಸರಕಾರದ ಅವಧಿಯಲ್ಲಿ ಇಲ್ಲಿಯವರೆಗೆ 4 ಲಕ್ಷಕ್ಕೂ ಹೆಚ್ಚು ರೈತರು ಹಲವು ಸಂಕಷ್ಟಗಳಿಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜೂ ಕೃಷ್ಣನ್ ಆರೋಪಿಸಿದ್ದಾರೆ.
ಸೋಮವಾರ ನಗರದ ಕೊಂಡಜ್ಜಿ ಬಸಪ್ಪ ಭವನದಲ್ಲಿ ದಿಲ್ಲಿಯ ಐತಿಹಾಸಿಕ ರೈತ ಹೋರಾಟದ ನೆನಪಿನಾರ್ಥವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಜೆಸಿಟಿಯು ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರಕಾರ ರೈತ ವಿರೋಧಿ ನೀತಿಗಳ ಮೂಲಕ ರೈತರ ಬದುಕನ್ನು ನಾಶ ಮಾಡಿದೆ. ರೈತರ ಪರ ನಿಂತ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಇದು ಸರ್ವಾಧಿಕಾರಿ ಧೋರಣೆಯ ಸಂಕೇತ ಎಂದು ಕಿಡಿಕಾರಿದರು.
ಉತ್ತರಪ್ರದೇಶದ ಲಿಖೀಂಪುರ ಕೇರಿಯಲ್ಲಿ ರೈತರ ಮೇಲೆ ಕಾರು ಹತ್ತಿಸಿದ ಸಚಿವರ ಮಗನ ಮೇಲೆ ಸರಕಾರಗಳು ಯಾವುದೇ ಕ್ರಮಜರುಗಿಸಿಲ್ಲ, ಆ ಸಚಿವರು ರಾಜೀನಾಮೆಯನ್ನು ನೀಡಲಿಲ್ಲ. ಹೀಗೆ ಆಳುವ ಸರಕಾರಗಳು ರೈತರ ಮೇಲೆ ದಾಳಿ ನಡೆಸುತ್ತಿವೆ. ಈ ದಾಳಿಯ ವಿರುದ್ಧ ಪ್ರಬಲ ಹೋರಾಟ ರೂಪಿಸಬೇಕು ಎಂದು ವಿಜೂ ಕೃಷ್ಣನ್ ಕರೆಕೊಟ್ಟರು.
ಭತ್ತ, ಹತ್ತಿ, ತೊಗರಿ, ರಬ್ಬರ್ಗೆ ಬೆಂಬಲ ಬೆಲೆ ಸಿಗದೆ ರೈತರಿಗೆ ಕೋಟ್ಯಾಂತರ ರೂ. ನಷ್ಟವಾಗುತ್ತಿದೆ. ಪರಿಣಾಮ ರೈತರ ಸಾಲ ಹೆಚ್ಚಾಗಿ ರೈತರು ಸಾಯುವ ಸ್ಥಿತಿಯನ್ನು ಸರಕಾರ ನಿರ್ಮಾಣ ಮಾಡುತ್ತಿದೆ ಎಂದು ವಿಜೂ ಕೃಷ್ಣನ್ ಆಕ್ರೋಶ ವ್ಯಕ್ತಪಡಿಸಿದರು.
ನವೆಂಬರ್ 26, 27, 28ರಂದು ಮೂರು ದಿನಗಳ ಕಾಲ ನಡೆಯುವ ಹೋರಾಟದ ಸ್ವರೂಪವನ್ನು ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಮಂಡಿಸಿದರು. ಮೂರು ದಿನಗಳ ಕಾಲ ನಡೆಯುವ ಹೋರಾಟದ ಹಕ್ಕೊತ್ತಾಯ ನಿರ್ಣಯವನ್ನು ಕರ್ನಾಟಕ ಪ್ರಾಂತರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್, ಸಿದ್ದುಗೌಡ ಮೋದಗಿ ಮಂಡಿಸಿದರು.
ಈ ಹೋರಾಟದಲ್ಲಿ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳಾ-ಯುವಜನ ಸಂಘಟನೆಗಳು, ದಲಿತ ಸಂಘಟನೆಗಳ ನೇತೃತ್ವದಲ್ಲಿ 1 ಲಕ್ಷಕ್ಕೂ ಅಧಿಕ ಜನ ಮೂರು ದಿನಗಳ ಕಾಲ ನಡೆಯುವ ಮಹಾಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಾಂತರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ತಿಳಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾದ ಕರ್ನಾಟಕ ಸಂಚಾಲಕ ಬಡಗಲಪುರ ನಾಗೇಂದ್ರ ಮತ್ತು ಜೆಸಿಟಿಯು ಕರ್ನಾಟಕ ಸಂಚಾಲಕ ಕೆ.ವಿ ಭಟ್, ದಲಿತ ಹಕ್ಕುಗಳ ನಾಯಕ ಮಾವಳ್ಳಿ ಶಂಕರ್ ಮಾತನಾಡಿದರು. ಸಮಾವೇಶದಲ್ಲಿ ರೈತ ನಾಯಕರಾದ ಸಿದ್ದನಗೌಡ ಪಾಟೀಲ್, ಯೂಸೂಫ್ ಕನ್ನಿ, ದೇವಿ, ನಿರ್ವಾಣಪ್ಪ. ಎಐಕೆಎಸ್ನ ರಾಷ್ಟ್ರೀಯ ನಾಯಕ ಆರ್.ವೆಂಕಯ್ಯ, ಪ್ರಾಂತರೈತ ಸಂಘದ ಉಪಾಧ್ಯಕ್ಷ ಯು.ಬಸವರಾಜ, ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳಾ-ಯುವಜನ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.