ವಾಡಿಕೆಗಿಂತ ಹೆಚ್ಚಿನ ಮಳೆ ನಿರೀಕ್ಷೆ ; ಹಾನಿ ತಪ್ಪಿಸಲು ಕ್ರಮ ವಹಿಸಲು ಕಂದಾಯ ಇಲಾಖೆ ಸುತ್ತೋಲೆ
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ರಾಜ್ಯದಲ್ಲಿ ಈ ಬಾರಿಯ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದ್ದು, ಸಂಭವಿಸಬಹುದಾದ ಹಾನಿಯನ್ನು ತಪ್ಪಿಸಲು ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಬೇಕೆಂದು ಕಂದಾಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರವಿವಾರ ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಕಂದಾಯ ಇಲಾಖೆ ಸರಕಾರದ ಉಪ ಕಾರ್ಯದರ್ಶಿ ಎಸ್.ಆರ್.ಶಿವಶಂಕರ್, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತೆ ಸಭೆ ನಡೆಸಿ ಮಳೆ ಅನಾಹುತ ತಡೆಗಟ್ಟಲು ಮುನ್ನಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ.
ಮಳೆಗಾಲಕ್ಕೆ ಮುಂಚಿತವಾಗಿಯೇ ಮಳೆ ನೀರು ಸರಾಗವಾಗಿ ಹರಿಯುವ ಕಾಲುವೆ, ಚರಂಡಿ, ಸೇತುವೆಗಳಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ನದಿ, ನೀರಾವರಿ ಕೆರೆ, ಕಾಲುವೆಗಳ ಸಮೀಪವಿರುವ ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸಬೇಕು. ಅಲ್ಲದೆ, ಚರಂಡಿಗಳ ಮೇಲಿನ ಕಲ್ಲುಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.