ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿದ ಸಂಸದ ಸಂಗಣ್ಣ ಕರಡಿ
ಬೆಂಗಳೂರು: ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಸಂಸದ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಮಂಗಳವಾರ ಈ ಸಂಬಂಧ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿರುವ ಸಂಗಣ್ಣ ಕರಡಿ ಅವರು, "ಈ-ಮೇಲ್ ಮೂಲಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಪತ್ರ ರವಾನೆ ಮಾಡಿದ್ದೇನೆ" ಎಂದು ವಿವರಣೆ ನೀಡಿದರು.
ಎರಡು ಅವಧಿಗೆ ಸಂಸದರಾಗಿ ಆಯ್ಕೆಯಾಗಿದ್ದ ಸಂಗಣ್ಣ ಕರಡಿ ಅವರು ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದರು. ಅಲ್ಲದೆ, ಪಕ್ಷದ ನಾಯಕರ ವಿರುದ್ಧವೇ ಬಹಿರಂಗ ವಾಗ್ದಾಳಿ ನಡೆಸಿದ್ದರು. ಈ ಮಧ್ಯೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದರು.
ಈ ಬೆಳವಣಿಗೆಗಳ ನಡುವೆಯೇ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಇನ್ನಿತರ ಮುಖಂಡರ ಭೇಟಿ ಮಾಡಿದ್ದರು. ನಾಳೆ(ಎ.17) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಖುದ್ದು ಭೇಟಿ ಮಾಡಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.