ಬಿಜೆಪಿ ನೋಟಿಸ್ ಹಿಂದೆ ಮಹಾನಾಯಕರೊಬ್ಬರ ಕೈವಾಡ : ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು : ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನನಗೆ ಶೋಕಾಸ್ ನೋಟಿಸ್ ನೀಡಿರುವುದರ ಹಿಂದೆ ಮಹಾನ್ ನಾಯಕರೊಬ್ಬರ ಕೈವಾಡವಿದೆ. ನಾನು ಇದಕ್ಕೆಲ್ಲಾ ಭಯ ಬಿದ್ದಿಲ್ಲ, ದಾಖಲೆ ಸಹಿತವಾಗಿ ಉತ್ತರ ಕೊಡುತ್ತೇನೆ. ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ನನಗೆ ಶೋಕಾಸ್ ನೋಟಿಸ್ ಬಂದಿದ್ದು ನನಗೆ ಬೇಸರವಾಗಿಲ್ಲ, ನೋವು ಆಗಿಲ್ಲ ಬದಲಾಗಿ ಅತ್ಯಂತ ಸಂತೋಷವಾಗಿದೆ. ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ಮಾತನಾಡಿದ್ದಕ್ಕೆ ನೋಟಿಸ್ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದವರ ವಿವರ ಕೊಡುತ್ತೇನೆ. ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಬೆಳವಣಿಗೆ ಬಗ್ಗೆ ಹೈಕಮಾಂಡ್‍ಗೆ ನಾನೇ ಪತ್ರ ಬರೆದಿದ್ದರೆ, ಬೇರೆಯದ್ದೇ ಬೆಳವಣಿಗೆ ಆಗುತಿತ್ತು. ಆಗ ರಾಷ್ಟ್ರೀಯ ನಾಯಕರು ಅಪಾರ್ಥ ಮಾಡಿಕೊಳ್ಳುತ್ತಿದ್ದರು. ಆದರೆ, ಇದೀಗ ಒಂದು ವೇದಿಕೆ ಸಿಕ್ಕಹಾಗೇ ಆಗುತ್ತಿದೆ. ಐದಾರು ವರ್ಷಗಳಿಂದ ಪಕ್ಷದಲ್ಲಿನ ಗೊಂದಲಗಳು ಮತ್ತು ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಪತ್ರ ಬರೆಯುತ್ತೇನೆ. ಪತ್ರ ಬರೆಯುವ ಮೂಲಕ ಶಿಸ್ತು ಸಮಿತಿಗೆ ಸಮರ್ಪಕ ಉತ್ತರ ನೀಡುತ್ತೇನೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಲವರು ವಿಧಾನಸಭೆ ಹೊರಗಡೆ ಮತ್ತು ಒಳಗಡೆ ನಿರಂತರವಾಗಿ ಟೀಕೆ ಮಾಡಿದ್ದರು. ಅಂತಹವರಿಗೆ ಅಂದೇ ನೋಟಿಸ್ ಕೊಟ್ಟು ಬಾಯಿ ಮುಚ್ಚಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹೀಗಾಗಿಯೇ ಬಿಜೆಪಿ 2013 ಮತ್ತು 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದು ತಪ್ಪು ಎಂದು ನೇರವಾಗಿ ಹೇಳಿದ್ದೇನೆ. 2019ರಿಂದ ಇಲ್ಲಿಯವರಿಗೆ ಯಡಿಯೂರಪ್ಪನವರನ್ನು ಟೀಕೆ ಮಾಡಿದವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದರು.
ಪ್ರಹ್ಲಾದ್ ಜೋಶಿ, ನಳೀನ್ ಕುಮಾರ್ ಕಟೀಲ್ ಇದ್ದಾಗ ಯಾಕೆ ಟೀಕೆ ಮಾಡಲಿಲ್ಲ. ಬಸವರಾಜ ಬೊಮ್ಮಾಯಿ ಇದ್ದಾಗಲು ಟೀಕೆ ಮಾಡಲಿಲ್ಲ. ಆದರೆ, ಬಿ.ಎಸ್.ಯಡಿಯೂರಪ್ಪ ಮತ್ತು ವಿ.ವೈ.ವಿಜಯೇಂದ್ರ ಇದ್ದಾಗ ಮಾತ್ರ ಟೀಕೆ ಯಾಕೆ?, ಇದರ ಹಿಂದೆ ಕೆಲವರ ಕುಮ್ಮಕ್ಕು ಇದೆ ಎಂದು ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.
ಭಯಪಡುವ ವ್ಯಕ್ತಿ ನಾನಲ್ಲ: ಮಾ.25ರ ರಾತ್ರಿ ನೋಟಿಸ್ ಕೈ ಸೇರಿದೆ. ನೋಟಿಸ್ ಬಂದ ಬಳಿಕ ಕಾರ್ಯಕರ್ತರು, ಶಾಸಕರು, ಮಾಜಿ ಶಾಸಕರು ನನ್ನ ಜೊತೆ ಮಾತನಾಡಿದ್ದಾರೆ. ಜೊತೆಗೆ ವೀರಶೈವ ಮುಖಂಡರು ಸಹ ಕರೆ ಮಾಡಿ ಮಾತನಾಡಿದ್ದಾರೆ. ನನ್ನೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದ್ದಾರೆ. ಆದರೆ, ನಾನು ನೋಟಿಸ್‍ಗೆ ಯಾವುದೇ ಭಯಪಟ್ಟಿಲ್ಲ. ರೇಣುಕಾಚಾರ್ಯ ಎಂದಿಗೂ ಭಯಪಡುವ ವ್ಯಕ್ತಿಯಲ್ಲ. ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಬಗ್ಗೆ ಎರಡು ತಿಂಗಳ ಹಿಂದೆಯೇ ಮಾತನಾಡಿಕೊಂಡಿದ್ದರು. ಪಕ್ಷದೊಳಗಿನ ಎಲ್ಲ ಬೆಳವಣಿಗೆಯನ್ನು ವಿವರಿಸಿ ಹೈಕಮಾಂಡ್‍ಗೆ ಪತ್ರ ಬರುತ್ತೇನೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.