ಮುಡಾ ಪ್ರಕರಣ | ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್ ಸಲ್ಲಿಸಿರುವ ದೂರಿಗೆ ಸಿಎಂ ಸ್ಪಷ್ಟನೆ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್‍ನವರು ರಾಜ್ಯಪಾಲರಿಗೆ ಸಲ್ಲಿಸಿರುವ ದೂರು ಅಥವಾ ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಿಜೆಪಿ ಮತ್ತು ಜೆಡಿಎಸ್‍ನವರು ರಾಜ್ಯಪಾಲರ ಕಚೇರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. 1935ರ ಆ.2ರಲ್ಲಿ ಜವರನ ಮಗ ನಿಂಗ ಎನ್ನುವವರು ಮೈಸೂರು ತಾಲೂಕು ಕಚೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಗಿನ ಕೆಳ ಹಂತದ ಅಧಿಕಾರಿಗಳು ಆ.15ರಂದು ನಿಂಗ ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇಪಡಿಸಬೇಕೆಂದು ವರದಿ ಸಲ್ಲಿಸಿದ್ದಾರೆ. 1935ರ ಸೆ.26ರಂದು ಹರಾಜು ನೋಟೀಸ್ ಹೊರಡಿಸಿ, ಅ.3ರಂದು ಹರಾಜು ನಡೆಸಲಾಗುವುದೆಂದು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಕೆಸರೆ ಗ್ರಾಮದ ಸ.ನಂ.464ರ 3.16 ಎಕರೆ ಜಮೀನು ಹರಾಜು ಮಾಡಲಾಯಿತು. 3 ರೂಪಾಯಿ ಹರಾಜು. 1 ರೂಪಾಯಿ ನಿಂಗ ಬಿನ್ ಜವರ, ಇದರ ಮೇಲೆ ಯಾರೂ ಸವಾಲು ಮಾಡಲಿಲ್ಲವಾಗಿ ಹರಾಜು ಅಖೈರು ಮಾಡಲಾಯ್ತು ಎಂದು ದಾಖಲಿಸಲಾಗಿದೆ. 1935ರ ಅ.13ರಂದು ಮಾರಾಟ ದೃಢ ಎಂದು ನಮೂದಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು ಈ ಜಮೀನುಗಳ ಮೇಲೆ ಸರಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಹಾಗಾಗಿ ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಬಿಜೆಪಿ, ಜೆಡಿಎಸ್ ನವರು ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
1993ರ ಎ.10ರಲ್ಲಿ ಮಾಡಿಸಿರುವ ವಂಶವೃಕ್ಷದ ಪ್ರಕಾರ ನಿಂಗ ಅವರಿಗೆ ಮೂರು ಜನ ಮಕ್ಕಳು. ಮೊದಲನೆಯವರು ಮಲ್ಲಯ್ಯ, ಎರಡನೆಯವರು ಮೈಲಾರಯ್ಯ ಮತ್ತು ಮೂರನೆಯವರು ಜೆ.ದೇವರಾಜು. ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ. ಮೈಲಾರಯ್ಯಗೆ ಮಂಜುನಾಥಸ್ವಾಮಿ ಎನ್ನುವವರಿದ್ದಾರೆ. ದೇವರಾಜು(ಮಲ್ಲಿಕಾರ್ಜುನಸ್ವಾಮಿಗೆ ಜಮೀನು ಮಾರಾಟ ಮಾಡಿರುವುದು). ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ.ಮಂಜುನಾಥಸ್ವಾಮಿ ಸಹಿ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದೇವರಾಜು ಹೆಸರಿಗೆ ಖಾತೆ ಮಾಡಿಕೊಡಲು ಈ ಮೇಲಿನ ಎಲ್ಲರೂ ಸಹಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ಕ್ರಯದಾರರ ವಾರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿಜೆಪಿ ಆರೋಪ ಸುಳ್ಳು. ಈ ಎಲ್ಲ ವ್ಯವಹಾರಗಳು 2010ಕ್ಕಿಂತ ಮುಂಚೆ ನಡೆದಿವೆ. ಇವು ನನಗೆ ಸಂಬಧಪಟ್ಟಿದ್ದಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಅಲ್ಲದೆ, ಬಿಜೆಪಿಯವರು ನೀಡಿರುವ ದೂರಿನಲ್ಲಿ ಜಮೀನುಗಳನ್ನು ಡಿ-ನೋಟಿಫಿಕೇಶನ್ ಮಾಡಲು ಮುಡಾದಿಂದ ಪ್ರಸ್ತಾವನೆ ಬಂದಿರಲಿಲ್ಲ, ಅರ್ಜಿದಾರರು ಅರ್ಜಿಯೂ ಕೊಟ್ಟಿರಲಿಲ್ಲ, ಆದರೂ ಡಿ.ನೋಟಿಫಿಕೇಶನ್ ನಡೆದಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಈ ಜಮೀನುಗಳನ್ನು ಭೂಸ್ವಾಧೀನ ಮಾಡಲು 1992ರ ಸೆ.18ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾರೆ. 1996 ಆ.13ರಂದು ದೇವರಾಜು ತಮ್ಮ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಜಮೀನುಗಳ ಅಂತಿಮ ಅಧಿಸೂಚನೆಯಾಗಿದ್ದು, 1997ರ ಆ.20ರಂದು. ಮುಡಾದಲ್ಲಿ 1997ರ ಜು.24ರಂದು ಈ ಜಾಗ ಭೂಸ್ವಾಧೀನದಿಂದ ಕೈಬಿಡಲು ನಿರ್ಣಯ ಅಂಗೀಕರಿಸಿದ್ದಾರೆ. ಆ.30ರಂದು ಸದರಿ ಜಾಗಗಳನ್ನು ಭೂಸ್ವಾಧೀನದಿಂದ ಕೈಬಿಡಲು ಮುಡಾ ಆಯುಕ್ತರು ಸರಕಾರದ ಕಾರ್ಯದರ್ಶಿಗೆ ಶಿಫಾರಸ್ಸು ಮಾಡಿದ್ದಾರೆ. ಅದನ್ನು ಆಧರಿಸಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆಯ ತ್ರಿಸದಸ್ಯ ಸಮಿತಿ ಪರಿಶೀಲಿಸಿ ಡಿ ನೋಟಿಫೈ ಮಾಡಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235- 30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ. ಯಾವುದೇ ಜಾಗವನ್ನು ಭೂಸ್ವಾಧೀನ ಮಾಡಿ ಭೂಮಿಯ ಪರಿಹಾರ ಪಾವತಿಸಿ ಆ ಭೂಮಿಯ ಸಂಪೂರ್ಣ ಸ್ವಾಧೀನವನ್ನು ತೆಗೆದುಕೊಳ್ಳದ ಹೊರತು ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣವಾಗುವುದಿಲ್ಲ. ಇಷ್ಟಕ್ಕೂ ಈ ಜಮೀನುಗಳನ್ನು 1998ರ ಮೇ 18ರಲ್ಲಿ ಕೈಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಕುಟುಂಬಕ್ಕೆ ಈ ಜಮೀನುಗಳು ಬರುವ ವೇಳೆಗಾಗಲೆ 2005ರ ಜು.15ರಲ್ಲಿ ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿವೆ. ಇದಾದ ಮೇಲೆ 2014ರ ಜೂ.23ರಲ್ಲಿ ಮತ್ತು 2021ರ ಅ.25ರಲ್ಲಿ ಭೂ ಪರಿಹಾರಕ್ಕೆ ಬದಲಾಗಿ ಪರ್ಯಾಯ ಜಾಗವನ್ನು ಕೊಡಬೇಕೆಂದು ನನ್ನ ಪತ್ನಿ ಅರ್ಜಿ ಹಾಕಿದ್ದಾರೆ. ಅದರಂತೆ, ಮುಡಾದವರು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಭೂ ಸ್ವಾಧೀನ ಪಡಿಸದೆ ಭೂಮಿಯನ್ನು ಉಪಯೋಗಿಸಿಕೊಂಡ ಪ್ರಕರಣಗಳಲ್ಲಿ ಹಾಗೆ ಉಪಯೋಗಿಸಲಾದ ಭೂಮಿಗೆ ಪರ್ಯಾಯವಾಗಿ ಶೇ.50:50ರ ಅನುಪಾತದಲ್ಲಿ ಜಾಗವನ್ನು ಕೊಡಬೇಕೆಂದು ಮುಡಾದವರು 2020ರ ಸೆ.14ರಲ್ಲಿ ನಿರ್ಣಯ ಮಾಡಿದ್ದಾರೆ. ಈ ನಿರ್ಣಯವನ್ನು ಸರಕಾರ ರದ್ದು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ವರ್ಷ ಡಿ.7ರಂದು ‘ಇನ್ನು ಮುಂದೆ ಪ್ರಾಧಿಕಾರ ಭೂ ಸ್ವಾಧೀನಪಡಿಸದೇ ಉಪಯೋಗಿಸಿಕೊಂಡಿರುವಂತಹ ಪ್ರಕರಣಗಳಲ್ಲಿ ಭೂ ಪರಿಹಾರ ರೂಪದಲ್ಲಿ ಪರಿಹಾರವಾಗಿ ಅಭಿವೃದ್ಧಿ ಪಡಿಸಿದ ಒಟ್ಟು ವಿಸ್ತೀರ್ಣದ ಪೈಕಿ ಶೇ.50 ವಿಸ್ತೀರ್ಣದ ಅಭಿವೃದ್ಧಿ ಪಡಿಸಿದ ಜಾಗವನ್ನು ಒಪ್ಪುವ ಪ್ರಕರಣಗಳಲ್ಲಿ ನೀಡಬಹುದೆಂದು ನಿರ್ಣಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೆಲ್ಲ ಆದ ಮೇಲೆ ನನ್ನ ಪತ್ನಿ 2021ರ ಅ.23ರಂದು ಮತ್ತೆ ಅರ್ಜಿ ಸಲ್ಲಿಸಿ, ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಬಾಬ್ತು ಇದುವರೆವಿಗೂ ಯಾವುದೇ ಪರಿಹಾರವನ್ನು ನೀಡಿಲ್ಲ. ಆದುದರಿಂದ, ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ ಶೇ.50:50ರ ಅನುಪಾತದಲ್ಲಿ ಕೊಡಿ ಎಂದು ಕೇಳಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮುಡಾದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು 3-16 ಎಕರೆ ಜಮೀನುಗಳ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು 2021ರ ಡಿ.30ರಂದು ಕೆಸರೆ ಗ್ರಾಮದ ಸ.ನಂ. 464 ರ 3-16 ಎಕರೆ ಜಮೀನಿಗೆ ಬದಲಿ ಜಾಗ ನೀಡುವ ಬಗ್ಗೆ ಮುಡಾ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿ 38,284 ಚದರ ಅಡಿ ಅಳತೆಗೆ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಇದರಲ್ಲಿ ಕಾನೂನು ವಿದ್ಯಾರ್ಥಿಯಾದ ನನಗೆ ಹಾಗೂ 40 ವರ್ಷಗಳಿಂದ ಸುಧೀರ್ಘ ರಾಜಕಾರಣದಲ್ಲಿ ಇರುವ ನನಗೆ ಒಂದು ನಯಾಪೈಸೆಯಷ್ಟು ತಪ್ಪುಗಳೂ ಕಂಡುಬರುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮಾಧ್ಯಮದ ಮೂಲಕ ಈ ನಾಡಿನ ಜನರ ಮುಂದೆ ಇಡುತ್ತಿದ್ದೇನೆ. ಈ ವಿಚಾರಗಳನ್ನೆಲ್ಲಾ ಪರಿಶೀಲಿಸಲು ನ್ಯಾ.ಪಿ.ಎನ್.ದೇಸಾಯಿ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗವನ್ನು ರಚಿಸಲಾಗಿದೆ. ವಿಚಾರಣಾ ಆಯೋಗವು ಈ ಕುರಿತು ತನಿಖೆ ಪ್ರಾರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ, ಜೆಡಿಎಸ್ ನವರು ಮುಡಾದ ವಿಚಾರದಲ್ಲೂ, ವಾಲ್ಮೀಕಿ ಹಗರಣದಲ್ಲೂ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯಪಾಲರು ಈ ವಾಸ್ತವಾಂಶಗಳನ್ನು ಆಧಿರಿಸಿ ಬಿಜೆಪಿ, ಜೆಡಿಎಸ್ ನವರಿಗೆ ಕಿವಿ ಹಿಂಡಿ ಬುದ್ದಿ ಹೇಳಬೇಕೆಂದು ವಿನಂತಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.