ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಅಭಯ
ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರದ ವಿರುದ್ಧ ಹೋರಾಟ : ಸುರ್ಜೇವಾಲ
youtube/ndian National Congress
ಹೊಸದಿಲ್ಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲ ಅನುಮತಿ ನೀಡಿರುವ ಬೆನ್ನಲ್ಲೆ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಅಭಯ ಹಸ್ತವನ್ನು ನೀಡಿದೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯ ಸಚಿವರು, ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಹೈಕಮಾಂಡ್ ನಾಯಕರ ಜೊತೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಹೈಕಮಾಂಡ್ ನಾಯಕರ ಜೊತೆ ನಡೆದ ಸಭೆಯಲ್ಲಿ ಕರ್ನಾಟಕದಲ್ಲಿನ ಪರಿಸ್ಥಿತಿ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಎಲ್ಲ ವಿವರಗಳನ್ನು ನಮ್ಮ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ನವರು ಪಂಜರದ ಗಿಣಿಯಾಗಿರುವ ರಾಜ್ಯಪಾಲರನ್ನು ಬಳಸಿಕೊಂಡು ಚುನಾಯಿತ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಯಾವ ರೀತಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪ್ರಧಾನಿ, ಕೇಂದ್ರ ಗೃಹ ಸಚಿವ ಹಾಗೂ ಇಡೀ ಬಿಜೆಪಿ ನಾಯಕತ್ವ ಕಾಣದ ಕೈಗಳಾಗಿ ರಾಜ್ಯಪಾಲರ ಹಿಂದೆ ನಿಂತುಕೊಂಡು ಯಾವ ರೀತಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ವಿವರಣೆ ನೀಡಿದ್ದಾರೆ ಎಂದು ಸುರ್ಜೇವಾಲ ತಿಳಿಸಿದರು.
ರಾಜ್ಯದ ಸುಮಾರು 4 ಕೋಟಿ ಕನ್ನಡಿಗ ಸಹೋದರ, ಸಹೋದರಿಯರಿಗೆ ಪ್ರಯೋಜನ ಕಲ್ಪಿಸುತ್ತಿರುವ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳನ್ನು ಕಳೆದ ಒಂದು ವರ್ಷದಿಂದ ನಿಲ್ಲಿಸಲು ಬಿಜೆಪಿ ಹಾಗೂ ಜೆಡಿಎಸ್ನವರು ಪ್ರಯತ್ನ ಪಡುತ್ತಿದ್ದಾರೆ. ಪ್ರತಿ ವರ್ಷ ನಾವು ರಾಜ್ಯದ ಜನರಿಗೆ 53 ಸಾವಿರ ಕೋಟಿ ರೂ.ಗಳನ್ನು ಈ ಗ್ಯಾರಂಟಿಗಳ ಮೂಲಕ ಪಾರದರ್ಶಕವಾಗಿ ತಲುಪಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಎಸ್ಸಿ, ಎಸ್ಟಿ, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ವರ್ಗದಲ್ಲಿನ ಬಡವರಿಗೆ ಅನುಕೂಲ ಕಲ್ಪಿಸುತ್ತಿರುವ ಕಾಂಗ್ರೆಸ್ ಗ್ಯಾರಂಟಿಗಳಿಂದ ಬಿಜೆಪಿ ಹಾಗೂ ಜೆಡಿಎಸ್ನವರು ಭಯಭೀತರಾಗಿದ್ದಾರೆ. ಇದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕಾಂಗ್ರೆಸ್ ಸರಕಾರದ ವಿರುದ್ಧದ ದಾಳಿಯಲ್ಲ, ರಾಜ್ಯದ ಜನತೆಯ ಮೇಲೆ ನಡೆಸುತ್ತಿರುವ ದಾಳಿಯಾಗಿದೆ ಎಂದು ಸುರ್ಜೇವಾಲ ಕಿಡಿಗಾರಿದರು.
ಸಿದ್ದರಾಮಯ್ಯದ ದೇಶದ ಅತಿ ಹಿರಿಯ ಹಿಂದುಳಿದ ವರ್ಗದ ನಾಯಕರಾಗಿದ್ದಾರೆ. ಕೇಂದ್ರ ಸರಕಾರದ ದೌರ್ಜನ್ಯಗಳನ್ನು ಎದುರಿಸುತ್ತೇವೆ. ರಾಜ್ಯಪಾಲರು ನೀಡಿರುವ ಅನುಮತಿಯ ವಿರುದ್ಧ ಕಾನೂನು ಹೋರಾಟವನ್ನು ಮಾಡುತ್ತೇವೆ. ಜೊತೆಗೆ, ಈ ವಿಚಾರವನ್ನು ಜನತಾ ನ್ಯಾಯಾಲಯಕ್ಕೂ ತೆಗೆದುಕೊಂಡು ಹೋಗುತ್ತೇವೆ ಎಂದು ಅವರು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಸೇರಿದಂತೆ ಹಲವರು ಬಿಜೆಪಿ ನಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡುವಂತೆ ತನಿಖಾಧಿಕಾರಿಗಳು ಕೋರಿದ್ದರೂ ಯಾವ ಕಾರಣಕ್ಕೆ ರಾಜ್ಯಪಾಲರು ಈವರೆಗೆ ಅನುಮತಿ ನೀಡಿಲ್ಲ ಎಂಬ ನಮ್ಮ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ, ಶಾಸಕರು ಈ ವಿಚಾರದಲ್ಲಿ ಹೋರಾಟ ಮಾಡುತ್ತೇವೆ ಎಂದು ಸುರ್ಜೇವಾಲ ತಿಳಿಸಿದರು.
ನಾವೆಲ್ಲ ಒಗ್ಗಟ್ಟಾಗಿ ಹೋರಾಡುತ್ತೇವೆ. ಈ ಹೋರಾಟದಲ್ಲಿ ಮುಖ್ಯಮಂತ್ರಿ ಜೊತೆ ನಾವು ನಿಂತಿದ್ದೇವೆ. ರಾಜ್ಯಪಾಲರು ನೀಡಿರುವ ಅನುಮತಿ ಸಂವಿಧಾನ ಬಾಹಿರ, ಕಾನೂನಿಗೆ ವಿರುದ್ಧವಾದದ್ದು. ಕಾನೂನು ಹೋರಾಟದಲ್ಲಿ ನಾವು ಗೆಲ್ಲುತ್ತೇವೆ. ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು ನೀಡುವುದು ಸೇರಿದಂತೆ ಎಲ್ಲ ಆಯ್ಕೆಗಳು ನಮ್ಮ ಮುಂದೆ ಇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆ. ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ನಮ್ಮ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದರು. ನಾವು ಎಲ್ಲ ವಿಚಾರವನ್ನು ಅವರ ಗಮನಕ್ಕೆ ತಂದಿದ್ದೇವೆ. ರಾಜ್ಯಪಾಲರ ನಡೆಯನ್ನು ತಿಳಿಸಿದ್ದೇವೆ ಎಂದರು.
ರಾಜ್ಯಪಾಲರು ನನ್ನ ವಿರುದ್ಧ ಕಾನೂನು ಕ್ರಮಕ್ಕೆ ನೀಡಿರುವ ಅನುಮತಿಯನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದೇವೆ. ಆ.29ರಂದು ಈ ಬಗ್ಗೆ ವಿಚಾರಣೆ ನಡೆಯಲಿದೆ. ನಮಗೆ ನ್ಯಾಯ ಸಿಗುತ್ತದೆ. ನ್ಯಾಯಾಲಯ, ನೆಲದ ಕಾನೂನಿನ ಮೇಲೆ ನಮಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಇಡೀ ದೇಶದಲ್ಲಿ ಅತಿದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದು ನಮ್ಮಲ್ಲಿ. ಆದುದರಿಂದ, ಸರಕಾರವನ್ನು ಅಸ್ಥಿರಗೊಳಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಾವು ನಮ್ಮ ನಾಯಕರಿಗೆ ಎಲ್ಲ ವಿಚಾರವನ್ನು ತಿಳಿಸಿದ್ದೇವೆ. ಅವರು ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಟ್ಟಿದ್ದಾರೆ. ಕಾನೂನು ಕ್ರಮಕ್ಕೆ ಅವಕಾಶ ನೀಡಿರುವ ರಾಜ್ಯಪಾಲರೇ ತಮ್ಮ ತೀರ್ಮಾನವನ್ನು ಹಿಂಪಡೆಯುವಂತಹ ಪರಿಸ್ಥಿತಿ ಬರುತ್ತದೆ ಎಂದರು.