ಮುಡಾ ಪ್ರಕರಣ | ರಾಜ್ಯಪಾಲರ ಮುಂದಿನ ನಡೆ ಗಮನಿಸುತ್ತಿದ್ದೇವೆ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ಮುಡಾ ಹಗರಣ ಸಂಬಂಧ ಪೂರ್ವಾನುಮತಿ ವಿಚಾರವಾಗಿ ರಾಜ್ಯಪಾಲರ ಮುಂದಿನ ನಡೆ ಗಮನಿಸುತ್ತಿದ್ದೇವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ವಿರುದ್ಧದ ಖಾಸಗಿ ದೂರಿನ ಸಂಬಂಧ ಇಂದು ಕೋರ್ಟ್ ತೀರ್ಪು ಬರಲಿ, ಆಮೇಲೆ ಏನು ಮಾಡಬೇಕೆಂದು ನಾವು ತೀರ್ಮಾನ ಮಾಡುತ್ತೇವೆ. ಅಲ್ಲದೆ, ರಾಜ್ಯಪಾಲರ ಕಚೇರಿ ಅನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ನಾವು ಮೊದಲಿನಿಂದಲು ಎಚ್ಚರಿಕೆ ಕೊಡುತ್ತಿದ್ದೇವೆ ಎಂದರು.
ಚೆನ್ನಾರೆಡ್ಡಿ ಭೇಟಿ: ಯಾದಗಿರಿ ಪಿಎಸ್ಸೈ ಪರಶುರಾಮ್ ಸಾವು ಪ್ರಕರಣದಲ್ಲಿ ಆರೋಪಕ್ಕೊಳಗಾಗಿರುವ ಶಾಸಕ ಚೆನ್ನಾರೆಡ್ಡಿ ಗೃಹ ಸಚಿವ ಪರಮೇಶ್ವರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿಯಾಗಿದ್ದರು.
ಇದೇ ವೇಳೆ ಮಾಧ್ಯಮಗಳ ಕಣ್ತಪ್ಪಿಸಿ ಹಿಂಬದಿ ಬಾಗಲಿನಿಂದ ಚೆನ್ನಾರೆಡ್ಡಿ ತೆರಳಿದರು. ಈ ಬಗ್ಗೆ ಮಾತನಾಡಿದ ಸಚಿವ ಜಿ.ಪರಮೇಶ್ವರ್, ಶಾಸಕ ಚೆನ್ನಾರೆಡ್ಡಿ ಬಂದು ಭೇಟಿ ಮಾಡಿದ್ದಾರೆ. ನನ್ನ ಹುಟ್ಟುಹಬ್ಬದ ದಿನ ಸಿಕ್ಕಿರಲಿಲ್ಲ. ಹಾಗಾಗಿ ಇವತ್ತು ಬಂದು ಭೇಟಿ ಮಾಡಿ ಹೋದರು ಪ್ರಕರಣ ಕುರಿತು ಚರ್ಚೆ ನಡೆದಿಲ್ಲ ಎಂದರು.
ಇನ್ನೂ, ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಸಹಜವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿ ಬಾರಿಯೂ ಈ ಭದ್ರತೆ ಒದಗಿಸಲಾಗುತ್ತದೆ. ಕೇಂದ್ರ ಸರಕಾರ ನೀಡುವ ಸೂಚನೆ ಹಾಗೂ ನಮ್ಮದೇ ಗುಪ್ತಚರ ಮಾಹಿತಿ ಆಧಾರದಲ್ಲಿ ಸಹಜವಾಗಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಎಲ್ಲ ಜಿಲ್ಲೆಗಳಿಗೂ ಸೂಚನೆ ನೀಡಲಾಗಿದ್ದು, ಮುಖ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ಪ್ರತಿಬಾರಿ ಸ್ವಾತಂತ್ರ್ಯ ದಿನಾಚರಣೆಯ ಮುಂಚಿತವಾಗಿ ಹಾಗೂ ನಂತರದ ಎರಡು ದಿನ ಕಟ್ಟೆಚ್ಚರ ವಹಿಸಲಾಗಿರುತ್ತದೆ ಎಂದು ತಿಳಿಸಿದರು