ಮೂಡಿಗೆರೆ | ಕಾರು-ಕೆಎಸ್ಸಾರ್ಟಿಸಿ ಬಸ್ ಮುಖಾಮುಖಿ ಢಿಕ್ಕಿ; ತಾಯಿ-ಮಗ ಸ್ಥಳದಲ್ಲೇ ಮೃತ್ಯು
ಚಿಕ್ಕಮಗಳೂರು, ಆ.12: ಕೆಎಸ್ಸಾರ್ಟಿಸಿ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಜಿಲ್ಲೆಯ ಮೂಡಿಗೆರೆ ಪಟ್ಟಣ ಸಮೀಪದ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರಿನ ಕೋಣನಕುಂಟೆಯ ನಿವಾಸಿ ಪೂಜಾ ಹಿರೇಮಠ್(43) ಹಾಗೂ ಆಕೆಯ ಮಗ ರಾಜಶೇಖರ್ ಹಿರೇಮಠ್(19) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಪೂಜಾ ಅವರ ಪತಿ ಶಿವಯಾಗಯ್ಯ ಹಿರೇಮಠ್(52) ಅವರು ಗಂಭೀರವಾಗಿ ಗಾಯಗೊಂಡಿದ್ದು, ಮೂಡಿಗೆರೆ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಯಾಗಯ್ಯ ಹಾಗೂ ಪೂಜಾ ದಂಪತಿ ತಮ್ಮ ಮಗ ರಾಜಶೇಖರ್ ನೊಂದಿಗೆ ಬೆಂಗಳೂರಿನಿಂದ ಸ್ವಿಪ್ಟ್ ಕಾರಿನಲ್ಲಿ ಕಾರ್ಕಳಕ್ಕೆ ಬಂದಿದ್ದರು. ದಂಪತಿಯ ಹಿರಿಯ ಮಗ ಕಾರ್ಕಳದಲ್ಲಿ ವ್ಯಾಸಂಗ ಮಾಡುತ್ತಿದ್ದು, ಆತನನ್ನು ನೋಡಿಕೊಂಡು ಚಾರ್ಮಾಡಿ ಮಾರ್ಗವಾಗಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಶನಿವಾರ ಮಧ್ಯಾಹ್ನ ಈ ಮೂವರಿದ್ದ ಕಾರು ಮೂಡಿಗೆರೆ ಪಟ್ಟಣ ಸಮೀಪದಲ್ಲಿರುವ ಮುದ್ರೆಮನೆ ಎಂಬಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ, ಸಕಲೇಶಪುರದಿಂದ ಮೂಡಿಗೆರೆಯತ್ತ ಬರುತ್ತಿದ್ದ ಸರಕಾರಿ ಸಾರಿಗೆ ಬಸ್‍ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗದಲ್ಲಿದ್ದ ಯುವಕ ರಾಜಶೇಖರ್ ಹಾಗೂ ಹಿಂಬದಿ ಸೀಟಿನಲ್ಲಿದ್ದ ಪೂಜಾ ಅವರ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಶಿವಯಾಗಯ್ಯ ಅವರಿಗೆ ಗಂಭೀರ ಗಾಯವಾಗಿದೆ.
ಸ್ಥಳೀಯರು ಹಾಗೂ ಸ್ಥಳೀಯ ಪೊಲೀಸರು ಶಿವಯಾಗಯ್ಯ ಅವರನ್ನು ಆಂಬ್ಯುಲೆನ್ಸ್ ಮೂಲಕ ಮೂಡಿಗೆರೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಕೆಎಸ್ಸಾರ್ಟಿಸಿ ಬಸ್ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದು, ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.