ಎಲ್ಲ ಶಾಸಕರಿಗೂ ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಆಸೆ ಇದೆ : ಮುರುಗೇಶ್ ನಿರಾಣಿ

ಬೆಂಗಳೂರು : ನಮ್ಮ ಪಕ್ಷದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜಿಲ್ಲಾ ಅಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರವರೆಗೂ ಚುನಾವಣೆ ನಡೆಯುತ್ತದೆ. ಅದರಂತೆ ರಾಜ್ಯಾಧ್ಯಕ್ಷ ಹುದ್ದೆಯ ಬಗ್ಗೆ ಪಕ್ಷದ ಎಲ್ಲ ಶಾಸಕರಿಗೂ ಆಸೆ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಶುಕ್ರವಾರ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಜಯೇಂದ್ರ ಅವರನ್ನು ಮಧ್ಯಂತರದಲ್ಲಿ ರಾಜ್ಯ ಘಟಕದ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು. ಅವರ ಕಾರ್ಯಕ್ಷಮತೆಯನ್ನು ನೋಡಿ ಮುಂದುವರೆಸುವ ನಿರ್ಧಾರ ವರಿಷ್ಠರಿಗೆ ಬಿಟ್ಟದ್ದು. ಆದರೆ, ಆ ಹುದ್ದೆಯ ಬಗ್ಗೆ ಪಕ್ಷದ ಎಲ್ಲ ಶಾಸಕರಿಗೂ ಆಸೆ. ಈಗ ಸಂಘಟನಾ ಪರ್ವ ನಡೆಯುತ್ತಿದ್ದು, ಎಲ್ಲವೂ ಬದಲಾಗಲಿದೆ ಎಂದು ಹೇಳಿದರು.
ಈ ಹಿಂದೆ ಬಿಜೆಪಿಯಲ್ಲಿ 100ಕ್ಕೂ ಹೆಚ್ಚು ಶಾಸಕರಿದ್ದೆವು. ಈಗ 60ಕ್ಕೂ ಹೆಚ್ಚು ಮಂದಿ ಇದ್ದೇವೆ. ಎಲ್ಲರಿಗೂ ಆ ಹುದ್ದೆಯ ಬಗ್ಗೆ ಆಸೆ ಇರುತ್ತದೆ. ಅದರಲ್ಲಿ ತಪ್ಪಿಲ್ಲ. ಆದರೆ ನಮ್ಮ ಆಸೆಗಿಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವೇ ಅಂತಿಮ ಎಂದ ಅವರು, ಪಕ್ಷದಲ್ಲಿನ ಅಸಮಾಧಾನ ಢಾಳಾಗಿ ಕಾಣುತ್ತಿದೆ. ಆದರೆ ಈ ಎಲ್ಲವನ್ನೂ ಗಮನಿಸಿರುವ ವರಿಷ್ಠರು ಕೆಲವರೊಂದಿಗೆ ಫೋನ್‍ಕರೆಯಲ್ಲಿ ಮಾತನಾಡಿದ್ದಾರೆ. ಕೆಲವರನ್ನು ಕರೆಸಿಕೊಂಡು ಮಾಹಿತಿ ಪಡೆದಿದ್ದಾರೆ ಎಂದರು.
ವಿಳಂಬ: ಇನ್ನೂ, ಸಕ್ಕರೆ ಕಾರ್ಖಾನೆಗಳು ಪೂರೈಸುವ ಎಥೆನಾಲ್‍ಗೆ ಕೇಂದ್ರ ಸರಕಾರ 10 ದಿನದೊಳಗೆ ಹಣ ಪಾವತಿಸುತ್ತದೆ. ಆದರೆ ರಾಜ್ಯ ಸರಕಾರ ಆರು ತಿಂಗಳಾದರೂ ಹಣ ಪಾವತಿಸಿಲ್ಲ. ಇದರಿಂದ ಕಾರ್ಖಾನೆಗಳು ಸಮಸ್ಯೆಗೆ ಸಿಲುಕಿವೆ. ಆದ್ದರಿಂದ 15 ದಿನಗಳಿಂದ ಒಂದು ತಿಂಗಳೊಳಗೆ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷ ಬರಗಾಲದಿಂದಾಗಿ ಎಥೆನಾಲ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಉತ್ಪಾದನೆ ಆರಂಭವಾಗಿದ್ದು, ಕಬ್ಬು ಮಾತ್ರವಲ್ಲದೆ, ಮೆಕ್ಕೆಜೋಳ ಮತ್ತು ಅಕ್ಕಿಯಿದಲೂ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ಮೂರು ವರ್ಷದ ಬೆಳೆಗಳಿಂದ ಈ ಬಾರಿ ಒಂದು ಸಾವಿರ ಕೋಟಿ ಎಥೆನಾಲ್ ಉತ್ಪಾದಿಸಲಾಗಿದೆ. ಹೀಗಾಗಿ ಈ ಎಥೆನಾಲ್ ಖರೀದಿಸಿ ಕೂಡಲೇ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.