ಭಾರತದ ಮೇಲೆ ಹಿಂದೂಗಳಷ್ಟೆ ಹಕ್ಕು ಮುಸ್ಲಿಂ ಸಮುದಾಯಕ್ಕಿದೆ: ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ: ಭಾರತದ ಮೇಲೆ ಹಿಂದೂಗಳಷ್ಟೇ ಹಕ್ಕು ಮುಸ್ಲಿಂ ಸಮುದಾಯಕ್ಕಿದೆ. ದೇಶದಲ್ಲಿ ಎರಡೂ ಕೋಮುಗಳ ನಡುವೆ ಏನೆಲ್ಲಾ ವಿಷ ಬಿಜ ಬಿತ್ತಿದಾಗಲೂ ಕೂಡ, ಎರಡೂ ಕೋಮುಗಳು ಏಕತೆ ಕಾಪಾಡುವಲ್ಲಿ ಶ್ರಮ ವಹಿಸಿವೆ. ಹೀಗಾಗಿ ಮುಂದೆ ದೇಶಕ್ಕೆ ಒಳ್ಳೆಯ ಕಾಲ ಬರಲಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಹಳೆ ಹುಬ್ಬಳ್ಳಿಯ ಅಸಾರ ಮೊಹಲ್ಲಾದಲ್ಲಿ ಈದ್ ಮಿಲಾದ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ ಮುಸ್ಲಿಂ ಸಮುದಾಯಕ್ಕೆ ಭೂಮಿಯ ಒಡೆತನ ಸಮಾನವಾಗಿ ಹಂಚಿಕೆಯಾಗಿಲ್ಲ. ಆದರೂ ದೇಶದ ಅಭಿವೃದ್ದಿ ಮತ್ತು ಇತರ ವಲಯಗಳಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಕಡೆಗಣಿಸಲಾಗದು ಎಂದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರರಿಗೆ ರಾಜಕೀಯ ಮರುಜನ್ಮ ನೀಡಿದ್ದು ಅಂದಿನ ಮುಸ್ಲಿಂ ಲೀಗ್ ಪಕ್ಷವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಕಷ್ಟಕಾಲದಲ್ಲಿದ್ದ ಭಗತ್ ಸಿಂಗ್ ಅವರ ಪರವಾಗಿ ಅಂದು ವಕಾಲತ್ತು ವಹಿಸಿದ್ದು ಆಸೀಫ್ ಅಲಿ ಎಂಬ ಭಾರತೀಯ ಮುಸ್ಲಿಂ ವ್ಯಕ್ತಿ ಎಂದು ಇತಿಹಾಸದ ಕಥನವನ್ನು ನೆನಪಿಸಿಕೊಂಡರು.
ಯಾರು ಎಷ್ಟೇ ಹುಳಿ ಹಿಂಡಿದರೂ ಹಿಂದೂ ಮುಸ್ಲಿಂರ ನಡುವಿನ ಸಾಮರಸ್ಯವನ್ನು ಕದಡಲು ಸಾಧ್ಯವಿಲ್ಲ. ದೇಶದಲ್ಲಿ ಈಗ ಸೃಷ್ಟಿಸಲಾಗಿರುವ ವಾತಾವರಣ ಸರಿ ಇಲ್ಲದಿದ್ದರೂ ಮುಂದೆ ಒಳ್ಳೆಯ ದಿನಗಳನ್ನು ಮುಸ್ಲಿಂ ಸಮುದಾಯ ಕಾಣಲಿದೆ ಎಂದು ಸಚಿವ ಸಂತೋಷ್ ಲಾಡ್ ಆಶಾಭಾವನೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ್, ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಹಳ್ಳೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.